ಭಟ್ಕಳ : ತಾಲೂಕಿನ ಮುರುಡೇಶ್ವರದಲ್ಲಿ ರಸ್ತೆ ಕಾಮಗಾರಿ ವಿಳಂಬವಾದ ಹಿನ್ನೆಲೆ ಅನಾಮಿಕರು ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಫಲಕ ಹಾಕಿದ್ದಾರೆ.
ತಾಲೂಕು ಸರ್ಕಾರಿ ಆಸ್ಪತ್ರೆಯಿಂದ ಮುರುಡೇಶ್ವರ ದೇವಸ್ಥಾನದವರೆಗೆ ಅಂದಾಜು 1.3 ಕಿಲೋ ಮೀಟರ್ ಉದ್ದದ ರಸ್ತೆ ಕಾಮಗಾರಿ ಒಂದೂವರೆ ವರ್ಷದಿಂದ ನಡೆಯುತ್ತಿದೆ. ಆದರೆ, ಇದು ಮುಗಿಯುವ ಹಂತಕ್ಕೆ ತಲುಪಿಲ್ಲ. ಮುಖ್ಯವಾಗಿ ಮುರುಡೇಶ್ವರ ಕಲ್ಯಾಣಿ ಪಕ್ಕದಲ್ಲಿ ಆರಕ್ಷರ ರಕ್ಷಣೆ ಕಾಮಗಾರಿ ಮಾಡಲು ಆರಂಭಿಸಿದ ಅಧಿಕಾರಿಗಳು ಈಗ ಇದ್ದಕ್ಕಿದ್ದಂತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ ಪರಿಣಾಮ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಂಗಡಿಯೊಂದರ ಎದುರಿಗೆ ಇರುವ ಚರಂಡಿ ಮತ್ತು ರಸ್ತೆ ಕಾಮಗಾರಿ ಮಾಡಿದ ಅಧಿಕಾರಿಗಳು ಈಗ ಕಾಮಗಾರಿ ನಿಲ್ಲಿಸಿದ್ದಾರೆ.
ಈ ಕೆಲಸ ಮಾಡುತ್ತಿರುವ ಗುತ್ತಿಗೆದಾರರು ಒಂದು ತಿಂಗಳು ಕಳೆದರು ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಬಸ್ತಿ, ದಿವಗೇರಿ ಚಂದ್ರಹಿತ್ಲು ಕನ್ನಡ ಶಾಲೆ ಕಡೆ ಹೋಗುವ ಸಾರ್ವಜನಿಕರಿಗೆ ತೊಂದರೆಯಾಗಿದೆ. ಆದರೂ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವ ಕಾರಣ ಈ ಧಿಕ್ಕಾರ ಫಲಕ ಹಾಕಿ ಅನಾಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.