ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ವಿಪರೀತವಾಗಿದ್ದು, ವಿಶ್ವದಲ್ಲೇ ಅತಿ ಕಲುಷಿತ ನಗರವಾಗುವ ಮೊದಲು ಅಗತ್ಯ ಕ್ರಮಗಳನ್ನು ಜರುಗಿಸಲು ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದ್ದು, ನವೆಂಬರ್ 18 ರಂದು ವಿಚಾರಣೆ ನಡೆಯಲಿದೆ.
ದೆಹಲಿಯಲ್ಲಿ ಸದ್ಯ ವಾಯು ಗುಣಮಟ್ಟ ತೀರಾ ಕಳಪೆಯಾಗಿದೆ. ಇದರಿಂದ ಜನರು ಚೇಂಬರ್ ಗ್ಯಾಸ್ನಲ್ಲಿ ಜೀವನ ನಡೆಸುವಂತಹ ಸ್ಥಿತಿಗೆ ತಲುಪುವ ಮೊದಲು, ವಾಯು ಗುಣಮಟ್ಟ ಕಾಪಾಡಲು ಅಗತ್ಯ ಕ್ರಮ ಜರುಗಿಸಬೇಕಾಗಿದೆ ಎಂದು ಈ ವಿಷಯದ ಕುರಿತು ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ವಕೀಲ ಅಪರಾಜಿತಾ ಸಿಂಗ್ ಅವರು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠಕ್ಕೆ ತಿಳಿಸಿದರು.
ವಾಯು ಗುಣಮಟ್ಟಕ್ಕೆ ಸಂಬಂಧಿಸಿದ ಈ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕಿದೆ ಎಂದು ಅವರು ಇದೇ ವೇಳೆ ಒತ್ತಾಯಿಸಿದರು. ನ್ಯಾಯಮೂರ್ತಿ ಓಕಾ ನೇತೃತ್ವದ ಪೀಠವು ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ.
ಅತ್ಯಂತ ಕಲುಷಿತ ನಗರ ಕುಖ್ಯಾತಿ ಸಾಧ್ಯತೆ: ದೆಹಲಿಯು ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಕುಖ್ಯಾತಿಗೆ ಒಳಗಾಗುವ ಮೊದಲು ವಾಯು ಗುಣಮಟ್ಟವನ್ನ ಸುಧಾರಿಸಬೇಕಿದೆ. ಇದಕ್ಕಾಗಿ ಬೇಕಾದ ಅಗತ್ಯ ಕ್ರಮಗಳನ್ನು ಆದಷ್ಟು ತೀವ್ರ ಗತಿಯಲ್ಲಿ ಜಾರಿಗೆ ತರಬೇಕಿದೆ ಎಂದು ಸಿಂಗ್ ಹೇಳಿದಾಗ, ಮಧ್ಯಪ್ರವೇಶಿಸಿದ ಕೋರ್ಟ್ ನಾವು ಕೂಡ ಇದೇ ವಿಷಯದ ಬಗ್ಗೆ ಚರ್ಚಿಸಿದ್ದೇವೆ. ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ ಎಂದಿತು.
ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಕಾಪಾಡಲು ವಾಯು ಗುಣಮಟ್ಟ ನಿರ್ವಹಣಾ ಆಯೋಗವು (ಸಿಎಕ್ಯೂಎಂ) ತೆಗೆದುಕೊಂಡ ಕ್ರಮಗಳನ್ನು ಬಹಿರಂಗಪಡಿಸಲು ಸೂಚಿಸಬೇಕು ಎಂದು ಸಿಂಗ್ ಅವರು ಪೀಠದ ಮುಂದೆ ಕೋರಿದರು. ಈ ಎಲ್ಲಾ ವಾದಗಳನ್ನು ಆಲಿಸಿದ ಬಳಿಕ ಕೋರ್ಟ್, ನವೆಂಬರ್ 18 ರಂದು ಹೆಚ್ಚಿನ ವಿಚಾರಣೆ ನಡೆಸುವುದಾಗಿ ತಿಳಿಸಿತು.
ದೆಹಲಿ ಗಾಳಿ ತೀವ್ರ ಕಳಪೆ: ದೆಹಲಿ ಗಾಳಿ 'ತೀವ್ರ ಕಳಪೆ' ಮಟ್ಟಕ್ಕೆ: ಸದ್ಯ ದೆಹಲಿ ಗಾಳಿಯು ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದೆ. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ 428 ಎಕ್ಯೂಐ ದಾಖಲಾಗಿದೆ. ಅಂದರೆ, ಇದು ತೀವ್ರ ಕಳಪೆ ಪ್ರಮಾಣವಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ನಗರದ ಗಾಳಿಯ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯುಐ) ಕುಸಿಯುತ್ತಿದೆ. ಬುಧವಾರ 418, ಅದಕ್ಕೂ ಹಿಂದಿನ ದಿನ 334 ಎಕ್ಯುಐ ಇತ್ತು ಎಂದಿದೆ.
ಇದನ್ನೂ ಓದಿ: ದೆಹಲಿ ವಾಯು ಗುಣಮಟ್ಟ ತೀವ್ರ ಕಳಪೆ; ನಗರಕ್ಕೆ ದಟ್ಟ ಮಂಜಿನ ಹೊದಿಕೆ