ಶಿರಸಿ: ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಜಿಲ್ಲೆಯ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕ್ಷೇತ್ರಕ್ಕೆ ಸರ್ಕಾರದಿಂದ ಭರಪೂರ ಅನುದಾನ ದೊರಕುತ್ತಿದ್ದು, ಮುಂಡಗೋಡಿನ ಚಿಗಳ್ಳಿ ಡ್ಯಾಂ ಪುನರುಜ್ಜೀವನ ಕಾಮಗಾರಿಗೆ 9 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ.
ಕಾಂಗ್ರೆಸ್ನಲ್ಲಿ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರ ಬರಲು ಕಾರಣರಾಗಿರುವ ಹೆಬ್ಬಾರ್ ಕ್ಷೇತ್ರಕ್ಕೆ ಸರ್ಕಾರದಿಂದ ಭರ್ಜರಿ ಅನುದಾನ ಬಿಡುಗಡೆಯಾಗುತ್ತಿದ್ದು, ಕಳೆದ ಮಳೆಗಾದಲ್ಲಿ ಒಡೆದಿದ್ದ ಚಿಗಳ್ಳಿ ಡ್ಯಾಂ ಅಭಿವೃದ್ಧಿಗೆ ಹಣ ಮಂಜೂರಾಗಿ ಕಾಮಗಾರಿ ಟೆಂಡರ್ ಹಂತದಲ್ಲಿದೆ.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಸುಮಾರು 9 ಕೋಟಿ ರೂ. ವಿಶೇಷ ಅನುದಾನ ಮಂಜೂರು ಆಗಿದೆ. ಇದಲ್ಲದೇ ಕ್ಷೇತ್ರದ ರಸ್ತೆ ಅಭಿವೃದ್ಧಿಗೂ ಸುಮಾರು 145 ಕೋಟಿ ರೂ. ಬಿಡುಗಡೆಯಾಗಿದ್ದು, ಬಿಜೆಪಿ ಸೇರಿದ ಮೇಲೆ ಹೆಬ್ಬಾರ್ ಕ್ಷೇತ್ರ ಲಾಟರಿ ಹೊಡೆದಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.