ಕಾರವಾರ : ಮೆದುಳು ರಕ್ತಸ್ರಾವದಿಂದ ಮೃತಪಟ್ಟಿದ್ದ ಪತ್ನಿಯ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗದೆ ಅಸಹಾಯಕರಾಗಿದ್ದ ಅನಾರೋಗ್ಯಪೀಡಿತ ಪತಿ ಹಾಗೂ ಮಗನ ನೆರವಿಗೆ ಧಾವಿಸಿದ ಉತ್ತರಕನ್ನಡ ಜಿಲ್ಲೆ ರೆಡ್ ಕ್ರಾಸ್ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ತಾವೇ ಮುಂದೆ ನಿಂತು ಅಂತಿಮ ವಿಧಿವಿಧಾನ ನೆರವೇರಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.
ತಾಲೂಕಿನ ಸದಾಶಿವಗಡದ ಅಲ್ಕಾ ನಾಯ್ಕ ಎಂಬ ಮಹಿಳೆ ಮೆದುಳು ರಕ್ತಸ್ರಾವದಿಂದ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಳು. ಆದರೆ, ಮೃತಳ ಪತಿ ಸಂತೋಷ ನಾಯ್ಕ ಆರ್ಥಿಕವಾಗಿ ಅಸಹಾಯಕನಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ.
ಅವರ ಎರಡೂ ಕಣ್ಣುಗಳು ಸರಿಯಾಗಿ ಕಾಣುತ್ತಿರಲಿಲ್ಲ. ಆಕೆಯ ಮಗ ಕೂಡ ಚಿಕ್ಕವನಿದ್ದು ತಾಯಿಯ ಶವ ನೋಡಲಾಗದೆ ಸಂಕಷ್ಟದಲ್ಲಿದ್ದನು.
ಈ ವಿಚಾರ ರೆಡ್ ಕ್ರಾಸ್ ವಿಪತ್ತು ನಿರ್ವಹಣಾ ಜಿಲ್ಲಾ ಘಟಕದ ಮುಖ್ಯಸ್ಥ ಮಾಧವ ನಾಯಕ ಅವರಿಗೆ ತಿಳಿದಿತ್ತು.
ಅಂತ್ಯ ಸಂಸ್ಕಾರ ನಡೆಸಲು ರೆಡ್ ಕ್ರಾಸ್ ವಿಪತ್ತು ನಿರ್ವಹಣಾ ಘಟಕದ ಪ್ರಮುಖರ ಜೊತೆ ಚರ್ಚಿಸಿ ಎಲ್ಲರೂ ಒಪ್ಪಿದ ಬಳಿಕ ನಗರದ ದಿವೇಕರ್ ಕಾಲೇಜು ಮುಂಭಾಗದ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನದಂತೆ ಶವ ಸಂಸ್ಕಾರ ನಡೆಸಲಾಯಿತು.
ಮೃತಳ ಪುಟ್ಟ ಮಗ ಸಾಹಿಲ್ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾನೆ. ಈ ವೇಳೆ ಆಕೆಯ ಪತಿ ಸಂತೋಷ ನಾಯ್ಕ ಕೂಡ ಹಾಜರಿದ್ದರು.
ಶವ ಸಾಗಾಟಕ್ಕೆ ನಗರಸಭೆ ವತಿಯಿಂದ ಪೌರಾಯುಕ್ತ ಆರ್.ಪಿ.ನಾಯ್ಕ ವಾಹನ ವ್ಯವಸ್ಥೆ ಕಲ್ಪಿಸಿಕೊಟ್ಟರು. ಶವ ದಹನಕ್ಕೆ ಕಟ್ಟಿಗೆ ವ್ಯವಸ್ಥೆಯನ್ನು ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಕಲ್ಪಿಸಿದ್ದರು.
ತಾಯಿ ಮೃತಪಟ್ಟು ಕೇವಲ ಮೂರು ದಿನವಾಗಿದ್ದರೂ ಅರವಿಂದ ಕೋಮಾರ ನಾಯ್ಕ ಅಂತ್ಯಸಂಸ್ಕಾರಕ್ಕೆ ಬೇಕಿದ್ದ ಸಿದ್ಧತೆ ನಡೆಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ರೆಡ್ ಕ್ರಾಸ್ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಮಾಧವ ನಾಯಕ, ಖಜಾಂಚಿ ರಾಮಾ ನಾಯ್ಕ, ವೈದ್ಯರಾದ ಡಾ.ಹೇಮಗಿರಿ, ಡಾ.ಪ್ರವೀಣ ಇನಾಮದಾರ, ನಗರಸಭೆ ಸಿಬ್ಬಂದಿಗಳಾದ ದತ್ತಪ್ರಸಾದ ಕಲ್ಗುಟ್ಕರ್, ಗಿರೀಶ್ ಶಿರಾಲೆಕರ್, ನಾಗರಾಜ ರವಿ, ರವಿ ಶಿವಾಜಿ ಗೋರೆ, ವಿನಾಯಕ ಆಚಾರಿ ಪಾಲ್ಗೊಂಡು ಮಾನವೀಯತೆ ಮೆರೆದಿದ್ದಾರೆ.