ಶಿರಸಿ (ಉತ್ತರಕನ್ನಡ) : ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ( ಕೆಡಿಸಿಸಿ ) ನಿಂದ ಮಾಜಿ ಸಚಿವ ರಮೇಶ ಜಾರಕಿಹೊಳಿ ಒಡೆತನದ
ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಗೆ ನೀಡಿದ ಸಾಲ ಮರುಪಾವತಿ ಆಗಿಲ್ಲ ಎಂದು ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌಭಾಗ್ಯ ಲಕ್ಷ್ಮಿ ಕಾರ್ಖಾನೆಯ ಜೊತೆಗೆ ಸೌರಿನ್ ಶುಗರ್ ಫ್ಯಾಕ್ಟರಿಯೂ ಕೂಡ ಸಾಲ ಮರುಪಾವತಿ ಮಾಡಿಲ್ಲ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಇತರರಿಗೆ ಸೇರಿದ ಕಾರ್ಖಾನೆಗೆ ನೀಡಿದ ಸಾಲ ಶೆ. 100ರಷ್ಟು ಸಾಲ ವಸೂಲಿ ಆಗಿದೆ ಎಂದು ಹೇಳಿದರು.
2 ಸಕ್ಕರೆ ಕಾರ್ಖಾನೆಗಳು ತಮ್ಮ ಸಾಲವನ್ನು ಬಾಕಿ ಉಳಿಸಿಕೊಂಡಿದೆ. ಉಳಿದ ಸಕ್ಕರೆ ಕಾರ್ಖಾನೆಗಳ ಸಾಲ ಮರುಪಾವತಿ ಆಗಿದೆ. ಮರುಪಾವತಿ ಮಾಡದ 2 ಕಾರ್ಖಾನೆಗಳು ಎನ್ಸಿಟಿಗೆ ಹೋಗಿದ್ದಾರೆ. ಅಲ್ಲಿ ಅವರ ಪರವಾಗಿ ತೀರ್ಪು ಬಂದರೆ ಎನ್ಸಿಟಿ ವಿರುದ್ಧ ಸುಪ್ರೀಂ ಕೋರ್ಟ್ಗೂ ಹೋಗೋಕಾಗಲ್ಲ. ಇದು ಇಂಡಸ್ಟ್ರಿಯಲ್ ಆಕ್ಟ್‌ನಲ್ಲಿದೆ. ಅಲ್ಲಿ ಇತ್ಯರ್ಥ ಆಗೋವರೆಗೂ ನಾವೇನೂ ಮಾಡೋಕಾಗಲ್ಲ ಎಂದು ಹೇಳಿದರು.
ಸನಾತನ ಧರ್ಮದ ಕುರಿತು ಮಾತನಾಡಿದ ಹೆಬ್ಬಾರ್, ಧರ್ಮವನ್ನು ಉಳಿಸೋದು ನಮ್ಮ ಕರ್ತವ್ಯ. ಅದರ ಹೆಸರಿನಲ್ಲಿ ಯಾರು ಏನು ಮಾತನಾಡಿದ್ದಾರೆ ಅನ್ನೋದನ್ನು ನಾನು ಚರ್ಚೆ ಮಾಡಲ್ಲ. ನಾವೆಲ್ಲ ಸನಾತನ ಧರ್ಮದ ಹಿನ್ನೆಲೆಯಿಂದ ಬಂದವರು. ನಮ್ಮ ಧರ್ಮದ ತಳಹದಿಯಲ್ಲಿ ನಾವು ಬದುಕುತ್ತೇವೆ. ನಮ್ಮ ಧರ್ಮವನ್ನು ಪ್ರೀತಿಸುತ್ತೇವೆ, ಅನ್ಯ ಧರ್ಮವನ್ನು ದ್ವೇಷ ಮಾಡೋ ಪ್ರವೃತ್ತಿ ಇಲ್ಲ. ಭಾರತೀಯ ಸಂಸ್ಕೃತಿಯೇ ಹಾಗೇ. ಯಾವುದೋ ರಾಜಕೀಯ ಪಕ್ಷದ ಕಾರಣದಿಂದ ಧರ್ಮ ಹುಟ್ಟಿಲ್ಲ. ಸನಾತನ ಪರಂಪರೆಯಿಂದ ಬಂದಿದ್ದು. ಯಾರು ಏನು ಮಾತಾಡ್ತಾರೆ ಅನ್ನೋದಕ್ಕೆ ನಾನ್ ತಲೆಕೆಡಿಸಿಕೊಳ್ಳಲ್ಲ ಎಂದು ಪ್ರತಿಕ್ರಿಯಿಸಿದರು.
ಕಳೆದ ಕೆಲವು ದಿನಗಳ ಹಿಂದೆ ತಮಿಳುನಾಡು ಸಿಎಂ ಸ್ಟಾಲಿನ್ ಅವರ ಪುತ್ರ ಹಾಗೂ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಉದಯನಿಧಿ, ಮಲೇರಿಯಾ, ಡೆಂಘೀ, ಕೊರೊನಾ ಮುಂತಾದವುಗಳನ್ನು ನಾವು ನಿವಾರಣೆ ಮಾಡುವುದಲ್ಲ ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದವು. ಅಲ್ಲದೆ ಹೇಳಿಕೆ ನೀಡಿದ್ದ ಉದಯನಿಧಿ ವಿರುದ್ಧ ಪ್ರಕರಣ ದಾಖಲಾಗಿದ್ದವು.
ಇದನ್ನೂ ಓದಿ : ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ಅದರ ಧ್ಯೇಯೋದ್ದೇಶಗಳ ಜಾರಿಗೆ ಪ್ರಯತ್ನಿಸಬೇಕು: ಸಿಎಂ ಸಿದ್ದರಾಮಯ್ಯ