ಕಾರವಾರ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಬಗ್ಗೆ ಉದ್ವೇಗದಿಂದ ಮಾತನಾಡಿರಬಹುದು. ಆದರೆ, ಈ ನಿರ್ಧಾರವನ್ನು ಅವರು ಬದಲಿಸಬೇಕಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ. ಯಲ್ಲಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರನ್ನು ಮಂತ್ರಿ ಮಾಡಬೇಕು. ಯಾರನ್ನು ಮಾಡಬಾರದು ಎಂಬುದು ಮುಖ್ಯಮಂತ್ರಿ ತೆಗೆದುಕೊಳ್ಳಬೇಕಾದ ನಿರ್ಧಾರ.
ಯಾರನ್ನೇ ಮಂತ್ರಿಗಳನ್ನಾಗಿ ಮಾಡುವ ಅಧಿಕಾರ ನಾಡಿನಲ್ಲಿ ಮುಖ್ಯಮಂತ್ರಿಗಳಿಗೆ ಮಾತ್ರ ಇರುತ್ತದೆ. ಆದರೆ, ಈ ವಿಷಯದಲ್ಲಿ ರಾಜ್ಯದ ಹಾಗೂ ಕೇಂದ್ರದ ನಾಯಕರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ರಮೇಶ್ ಜಾರಕಿಹೊಳಿ ನನ್ನ ಆತ್ಮೀಯ ಸ್ನೇಹಿತರು. ನಾವೆಲ್ಲ ಒಟ್ಟಿಗೆ ರಾಜೀನಾಮೆ ಕೊಟ್ಟು ಬಂದವರು. ಇದೀಗ, ಪುನಃ ರಾಜೀನಾಮೆ ಕೊಡುವ ಬಗ್ಗೆ ಜಾರಕಿಹೊಳಿ ಉದ್ವೇಗದಿಂದ ಮಾತನಾಡಿದ್ದಾರೆ. ಅವರು ಈ ರೀತಿ ನಿರ್ಧಾರ ಕೈಗೊಳ್ಳಬಾರದು ಎಂದು ಸಲಹೆ ನೀಡಿದರು.
ಇದನ್ನೂ ಓದಿ:ಸಚಿವ ಸಿಪಿವೈ ಯಾವ ವಿವಿಯಲ್ಲಿ ಪರೀಕ್ಷೆ ಬರೆದಿದ್ದಾರೋ ಅಲ್ಲಿಂದಲೇ ರಿಸಲ್ಟ್ : ಜೋಶಿ ಲೇವಡಿ
ನಟ ಚೇತನ್ ನನ್ನ ವಿರುದ್ಧ 1 ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿರುವುದನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಅವರು ನನ್ನ ಜಾತಿ ವಿರುದ್ಧ ಮಾತನಾಡಿದ್ದಾರೆ. ಯಾವುದೇ ಜಾತಿ ಬಗ್ಗೆ ಸಂಘರ್ಷ ಹುಟ್ಟು ಹಾಕಬಾರದು. ನಾನು ಸಮಾಜದ ಮುಖಂಡನಾಗಿ ಉತ್ತರ ಕೊಟ್ಟಿದ್ದು, ಆ ಉತ್ತರಕ್ಕೆ ಬದ್ಧನಾಗಿದ್ದೇನೆ ಎಂದು ಸಚಿವ ಹೆಬ್ಬಾರ್ ಸ್ಪಷ್ಟನೆ ನೀಡಿದರು.