ಶಿರಸಿ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಕಳೆದ ಐದು ದಿನಗಳಿಂದ ಸುಮಾರು 400 ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ಎಲ್ಲರಿಗೂ ಹತ್ತಿರದ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದು, 6 ಕ್ಕೂ ಅಧಿಕ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ.
ಸಿದ್ದಾಪುರದ ಅಕ್ಕುಂಜಿ, ಯಲ್ಲಾಪುರದ ಕಿರವತ್ತಿ, ಮುಂಡಗೋಡ ಸೇರಿದಂತೆ ವಿವಿಧ ಕಡೆಗಳಲ್ಲಿ ನಿರಾಶ್ರಿತರ ಕೇಂದ್ರವನ್ನು ತೆರೆದು ಅಲ್ಲಿ ಊಟ, ವಸತಿಯ ವ್ಯವಸ್ಥೆ ಮಾಡಲಾಗಿದೆ. ಸತತವಾಗಿ ಮಳೆಯಾಗುತ್ತಿರುವ ಕಾರಣ ಜಿಲ್ಲಾಡಳಿತ ವತಿಯಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಪ್ರವಾಹದ ಸೂಚನೆಯಿರುವ ಸ್ಥಳಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸುವ ಕೆಲಸ ಸಾಗಿದೆ.
ಉಕ್ಕಿ ಹರಿದ ವರದೆ : ವರದಾ ನದಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬನವಾಸಿ ಸುತ್ತಮುತ್ತಲಿನ ನಾಲ್ಕೈದು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮುಗೊಳ್ಳಿ ಮತ್ತು ಹೊಸಕೇರಿ ನಡುವಿನ ಸೇತುವೆ ಮುಳುಗಡೆಯಾದ ಪರಿಣಾಮ ಜನರಿಗೆ ಬೋಟ್ ವ್ಯವಸ್ಥೆ ಮಾಡಲಾಗಿದ್ದು, ನೀರು ಅಪಾಯದ ಮಟ್ಟ ತಲುಪಿದಲ್ಲಿ ಸುರಕ್ಷತೆ ಪ್ರದೇಶಕ್ಕೆ ತಲುಪಲು ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಗ್ರಾಮಗಳ ಕೃಷಿ ಪ್ರದೇಶಗಳು ಕಳೆದ ನಾಲ್ಕಾರು ದಿನಗಳಿಂದ ನೀರಿನಲ್ಲಿ ಮುಳುಗಿದ್ದು, 3 ಸಾವಿರ ಎಕರೆಗೂ ಅಧಿಕ ಪ್ರದೇಶ ಮುಳುಗಡೆಯಾಗಿದೆ. ನಾಟಿ ಭತ್ತ, ಬಾಳೆ, ಶುಂಠಿ, ಅನಾನಸ್ ಹೀಗೆ ಹಲವಾರು ಬೆಳೆಗಳು ನೀರು ಪಾಲಾಗಿ, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಅಪಾರ ಹಾನಿ : ಶಿರಸಿ ತಾಲೂಕಿನಾದ್ಯಂತ ಶುಕ್ರವಾರವೂ ಉತ್ತಮ ಮಳೆಯಾಗಿದ್ದು, ವಿವಿಧೆಡೆ ಅಪಾರ ಹಾನಿ ಸಂಭವಿಸಿದೆ. ಶುಕ್ರವಾರ ಒಂದೇ ದಿನ 15 ಕ್ಕೂ ಅಧಿಕ ವಾಸದ ಮನೆಗಳಿಗೆ ಹಾನಿಯಾಗಿದ್ದು, 5 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ. ತಾಲೂಕಿನ ಜಡ್ಡಿಗದ್ದೆ ಬಳಿಯ ಜಾಜಿಗುಡ್ಡೆಯಲ್ಲಿ ಭೂ ಕುಸಿತ ಸಂಭವಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಮನೆಗಳನ್ನು ತೊರೆಯಲು ಸೂಚನೆ ನೀಡಿದ್ದಾರೆ. ನಗರದ ಕೆ.ಎಚ್.ಬಿ. ಕಾಲೊನಿಯ ಶಾಲೆಯ ಬಾವಿ, ಕಾಂಪೌಂಡ್ ಗೋಡೆ ಕುಸಿದಿದ್ದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸಂಚಾರ ಬಂದ್ : ಉಪವಿಭಾಗದ ಯಲ್ಲಾಪುರ ತಾಲೂಕು ಅಕ್ಷರಶಃ ದ್ವೀಪದಂತಾಗಿದೆ. ಶಿರಸಿ - ಯಲ್ಲಾಪುರ ತೆರಳುವ ಬೇಡ್ತಿ ಸೇತುವೆ ಮುಳುಗಿದ್ದು, ಶಿಡ್ಲಗುಂಡಿ ಹೊಳೆ ಉಕ್ಕಿ ಮುಂಡಗೋಡ-ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಯಲ್ಲಾಪುರ -ಅಂಕೋಲಾ ಹೆದ್ದಾರಿಯಲ್ಲಿ ಗುಡ್ಡ ಕುಸಿಯುತ್ತಿದ್ದು, ಬಹುತೇಕ ಎಲ್ಲಾ ರಸ್ತೆಗಳು ಬಂದ್ ಆದಂತಾಗಿದೆ. ಅಲ್ಲದೇ ಸಿದ್ದಾಪುರದ ಮಾವಿನಗುಂಡಿ ಬಳಿ ಭೂ ಕುಸಿತ ಉಂಟಾಗಿ ಸಂಚಾರ ನಿಷೇಧಿಸಲಾಗಿದೆ.
ಮಳೆ ವರದಿ : ಶುಕ್ರವಾರ ಬೆಳಗ್ಗೆ 6 ಗಂಟೆಯವರೆಗೆ ಶಿರಸಿ ತಾಲೂಕಿನಲ್ಲಿ 98 ಮಿ.ಮೀ, ಸಿದ್ದಾಪುರದಲ್ಲಿ 156 ಮಿ.ಮೀ, ಯಲ್ಲಾಪುರದಲ್ಲಿ 203 ಮಿ.ಮೀ. ಹಾಗೂ ಮುಂಡಗೋಡಿನಲ್ಲಿ ದಾಖಲೆಯ 173 ಮಿ.ಮೀ ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಕ್ರಮವಾಗಿ 2280 ಮಿ.ಮೀ, 2703 ಮಿ.ಮೀ, 2603 ಹಾಗೂ 1100 ಮೀ.ಮೀ. ಮಳೆಯಾಗಿದ್ದು, ಈ ಮಳೆಯ ಅಂಕಿ ಅಂಶ ವಾಡಿಕೆ ಮಳೆಯ ಸಮೀಪವಿದೆ.