ಭಟ್ಕಳ: ಇಂದು ಅಧಿಕಾರವಿದ್ದರೆ ನಾಳೆ ಅಧಿಕಾರವಿರುವುದಿಲ್ಲ, ಸ್ಥಾನ ಶಾಶ್ವತವಲ್ಲ ಅದು ಸ್ವಾಭಾವಿಕ. ಆದರೆ ಪಕ್ಷಕ್ಕೆ ನಿಷ್ಠರಾಗಿದ್ದು, ಪಕ್ಷ ಸಂಘಟನೆಗೆ ಎಲ್ಲರೂ ಕಾರ್ಯ ಮಾಡಬೇಕಾಗಿರುವದು ನಮ್ಮೆಲ್ಲರ ಹೊಣೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಕಾರ್ಯಕರ್ತರಿಗೆ ಕರೆ ನೀಡಿದರು.
ಶಾಸಕ ಹಾಗೂ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಧಾರವಾಡ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದ ವೇಳೆ ಭಟ್ಕಳಕ್ಕೆ ಆಗಮಿಸಿದ್ದು ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ತಾಲೂಕು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನೊಳಗೊಂಡಂತೆ ಸಮಾಲೋಚನಾ ಸಭೆಯನ್ನು ನಡೆಸಿದರು.
ಸ್ಥಾನ ಮತ್ತು ಅಧಿಕಾರ ಶಾಶ್ವತವಲ್ಲ ಅದು ಸ್ವಾಭಾವಿಕ. ಆದರೆ ಪಕ್ಷಕ್ಕೆ ನಿಷ್ಠರಾಗಿದ್ದು, ಪಕ್ಷ ಸಂಘಟನೆಗೆ ಎಲ್ಲರೂ ಕಾರ್ಯ ಮಾಡಬೇಕು. ಕಾರ್ಯಕರ್ತರು ಜನರನ್ನು ತಲುಪಿ ಅವರಿಗೆ ಪಕ್ಷದ ಕಾರ್ಯದ ಬಗ್ಗೆ ತಿಳಿಸಬೇಕು. ಇದರಿಂದ ಮಾತ್ರ ಪಕ್ಷ ಬಲವರ್ಧನೆ ಸಾಧ್ಯ ಎಂದರು.
ಸಮ್ಮಿಶ್ರ ಸರಕಾರದ ಮುಕ್ತಾಯಕ್ಕೆ ಬಿಜೆಪಿ ಪಕ್ಷದ ಸಾಹಸವೂ ಈಗಾಗಲೇ ಜಗಜ್ಜಾಹೀರಾಗಿದೆ. ಸ್ಪೀಕರ್ ರಮೇಶ್ ನೀಡಿದ್ದ ಆದೇಶವನ್ನೇ ಇಂದು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅನರ್ಹರಾಗಿರುವುದು ನನ್ನ ಗಮನದಲ್ಲಿ ಮೊದಲಿರಬಹುದು ಎಂದರು.
ಬಿಜೆಪಿ ಸರಕಾರ, ಪ್ರವಾಹಕ್ಕೆ ಸಿಲುಕಿದವರಿಗೆ ಜೀವನ ಕಟ್ಟಿಕೊಳ್ಳಲು ಪರಿಹಾರದ ಭರವಸೆ ನೀಡಿ ಆಜ್ಞೆ ಮಾಡಿದೆ. ಆದರೆ ಅದ್ಯಾವುದು ಇನ್ನು ಅನುಷ್ಠಾನಕ್ಕೆ ಬಂದಿಲ್ಲ. ಇದರಿಂದ ರೈತರಿಗೆ, ಕಾರ್ಮಿಕರಿಗೆ ಮತ್ತು ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ ಎಂದು ತಿಳಿಸಿದರು.
ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡಿದ ಮಾಜಿ ಶಾಸಕ ಮಂಕಾಳ ವೈದ್ಯರ ಕೆಲಸವನ್ನು ಜನರು ಹೇಗೆ ಮರೆತರು ಎನ್ನುವುದು ಅರ್ಥವಾಗುತ್ತಿಲ್ಲ. ಇಲ್ಲದ ವಿಚಾರಕ್ಕೆ ಮರುಳಾಗದೇ, ಜನರು ಬದಲಾಗಿ ಪ್ರಜಾಪ್ರಭುತ್ವ ಬಲಪಡಿಸಬೇಕು. ಇವೆಲ್ಲವೂ ಪಕ್ಷದ ಮುಖಂಡರು ಕಾರ್ಯಕರ್ತರ ಕ್ರಿಯಾಶೀಲ ಕೆಲಸದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೇರ, ಮಾಜಿ ಶಾಸಕರಾದ ಮಂಕಾಳ ವೈದ್ಯ, ಜೆ.ಡಿ.ನಾಯ್ಕ, ತಂಜೀ ಸಂಸ್ಥೆ ಅಧ್ಯಕ್ಷ ಎಸ್.ಎಮ್.ಪರ್ವೇಜ್, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಸೇರಿದಂತೆ ತಾಲೂಕಿನ ಕಾಂಗ್ರೆಸ್ ಹಿರಿ-ಕಿರಿಯ ಮುಖಂಡರು, ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.