ಕಾರವಾರ (ಉತ್ತರ ಕನ್ನಡ) : ಕಳೆದ ಎಂಟು ವರ್ಷಗಳಿಂದ ಪಹರೆ ವೇದಿಕೆ ಕೇವಲ ಕಾರವಾರವಷ್ಟೇ ಅಲ್ಲದೇ, ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಂಡು ಜನರಲ್ಲಿ ಸ್ವಚ್ಛತಾ ಪ್ರಜ್ಞೆ ಮೂಡಿಸುತ್ತಿದೆ. ಇದೀಗ ಸಾರ್ವಜನಿಕರೊಂದಿಗೆ ಸುಮಾರು 15 ಕಿಲೋ ಮೀಟರ್ ದೂರ ಗೋವಾ ಗಡಿವರೆಗೆ ಪಾದಯಾತ್ರೆ ನಡೆಸುತ್ತಿದೆ. 2015ರಲ್ಲಿ ಕಾರವಾರದ ವಕೀಲ ನಾಗರಾಜ ನಾಯಕ ಅವರ ನೇತೃತ್ವದಲ್ಲಿ ಸಮಾನ ಮನಸ್ಕರಿಂದ ಪಹರೆ ವೇದಿಕೆ ಪ್ರಾರಂಭವಾಯಿತು. ಪ್ರತಿ ಶನಿವಾರ ಕಾರವಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿಕೊಂಡು ಬರುವ ಮೂಲಕ ಸ್ವಚ್ಛ ಕಾರವಾರಕ್ಕೆ ಈ ವೇದಿಕೆ ತನ್ನದೇ ಆದ ಕೊಡುಗೆ ನೀಡಿದೆ.
ಹರೇಕಳ ಹಾಜಬ್ಬರಿಂದ ಚಾಲನೆ: ವೇದಿಕೆಯು 8 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಭಾನುವಾರ ಸ್ವಚ್ಚತಾ ಜಾಗೃತಿಗಾಗಿ ಕಾರವಾರದಿಂದ ಗೋವಾ ಗಡಿಯವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಕಾರ್ಯಕ್ರಮಕ್ಕೆ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಆಗಮಿಸಿದ್ದರು. ನಗರದ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ಬೋಸ್‌ರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಅವರು ನಂತರ ಪಾದಯಾತ್ರೆಯ ಗೌರವಾಧ್ಯಕ್ಷರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿ ಚಾಲನೆ ಕೊಟ್ಟರು.
ನಗರದ ಸವಿತಾ ಸರ್ಕಲ್ ಮಾರ್ಗವಾಗಿ ಕೋಡಿಭಾಗ್ ವರೆಗೆ ತೆರಳಿದ ಪಾದಯಾತ್ರೆ ಅಲ್ಲಿಂದ ಹೆದ್ದಾರಿ ಮೂಲಕ ಕಾಳಿ ಸೇತುವೆ ಮೇಲೆ ಸಾಗಿತು. ಸೇತುವೆ ಬಳಿ ಲಘು ಉಪಹಾರ ಸೇವಿಸಿ ಚಿತ್ತಾಕುಲ, ಮಾಜಾಳಿ ಮಾರ್ಗವಾಗಿ ಸುಮಾರು 16 ಕಿಮೀ ನಡೆದು ಗೋವಾ ಗಡಿ ತಲುಪಿತು. ಪಾದಯಾತ್ರೆಯುದ್ದಕ್ಕೂ ಚಳಿ, ಬಿಸಿಲನ್ನೂ ಲೆಕ್ಕಿಸದೇ ಹರೇಕಳ ಹಾಜಬ್ಬ ಅವರೂ ಸಹ ಜನಸಾಮಾನ್ಯರೊಡನೆ ನಡೆದು ಸಾಗಿದರು.
ಪಹರೆ ಕಾರ್ಯದ ಕುರಿತು ಮಾತನಾಡಿದ ಹರೇಕಳ ಹಾಜಬ್ಬ, "ಈ ವೇದಿಕೆಯು ಕಳೆದ ಎಂಟು ವರ್ಷದಿಂದ ಸ್ವಚ್ಚತೆ ಮಾಡುವುದರೊಂದಿಗೆ ಗಿಡಗಳನ್ನೂ ಬೆಳೆಸುತ್ತಿರುವುದು ಒಳ್ಳೆಯ ಕಾರ್ಯ. ಒಳ್ಳೆ ಕೆಲಸಗಳನ್ನು ಮಾಡಿದಾಗ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಪಹರೆ ವೇದಿಕೆ ಸದಸ್ಯರಿಗೆ ದೇವರು ಇದೇ ರೀತಿ ಉತ್ತಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಶಕ್ತಿ ನೀಡಲಿ" ಎಂದು ಶುಭ ಹಾರೈಸಿದರು.
ಸ್ವಚ್ಚತಾ ಪಾದಯಾತ್ರೆ ಮಾರ್ಗದ ಅಲ್ಲಲ್ಲಿ ಸ್ಥಳೀಯರು ರಾಷ್ಟ್ರಧ್ವಜಕ್ಕೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಪಾದಯಾತ್ರಿಗಳನ್ನು ಹುರಿದುಂಬಿಸಿದರು. ಮಾಜಿ ವಿಧಾನಪರಿಷತ್ ಸದಸ್ಯೆ ಶುಭಲತಾ ಅಸ್ನೋಟಿಕರ್, ಮಾಜಿ ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವರು ಸ್ವಚ್ಚತಾ ಪಾದಯಾತ್ರೆಯನ್ನು ಸ್ವಾಗತಿಸುವ ಮೂಲಕ ಬೆಂಬಲ ಸೂಚಿಸಿದರು. ಕೆಲ ಸಮಾನ ಮನಸ್ಕರಿಂದ ಆರಂಭವಾದ ಪಹರೆ ವೇದಿಕೆ ಇದೀಗ ಬೇರೆ ಬೇರೆ ತಾಲ್ಲೂಕುಗಳಲ್ಲೂ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಸ್ವಚ್ಚತೆಯ ಕುರಿತು ಗಡಿಯಾಚೆಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಗೋವಾದ ಸಂಘ, ಸಂಸ್ಥೆಗಳನ್ನು ಗಡಿಯಲ್ಲಿ ಆಹ್ವಾನಿಸಿ ಅವರಿಗೆ ಗಿಡ ನೀಡುವ ಮೂಲಕ ಸ್ವಚ್ಛತಾ ಅಭಿಯಾನದ ಕುರಿತು ಮಾಹಿತಿ ನೀಡಲಾಯಿತು.
ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯ್ಕ ಮಾತನಾಡಿ, "ಕಳೆದ ಎಂಟು ವರ್ಷದಿಂದ ಪಹರೆ ಸದಸ್ಯರು ಮಳೆ ಬಿಸಿಲೆನ್ನದೆ ಪ್ರತಿ ಶನಿವಾರ ಸ್ವಚ್ಚತೆ ನಡೆಸಿದ್ದಾರೆ. ಕೊರೊನಾ ಸಂದರ್ಭದಲ್ಲಿಯೂ ತಮ್ಮ ಮನೆ ಸುತ್ತಮುತ್ತಲಿನ ಪರಿಸರದಲ್ಲಿಯೇ ಇಂತಹ ಕಾರ್ಯ ಮಾಡಿ ಮಾದರಿಯಾಗಿದ್ದಾರೆ. ಕಾರವಾರ ಮಾತ್ರವಲ್ಲದೆ ಕಳೆದ ವರ್ಷ ಅಂಕೋಲಾಗೆ ಪಾದಯಾತ್ರೆ ಮಾಡುವ ಮೂಲಕ ಪಹರೆ ವೇದಿಕೆ ಜನರಲ್ಲಿ ಸ್ವಚ್ಚತಾ ಜಾಗೃತಿ ನಡೆಸಿತ್ತು. ಈ ಬಾರಿ ಗೋವಾ ಗಡಿವರೆಗೆ ಪಾದಯಾತ್ರೆ ಹಮ್ಮಿಕೊಂಡು ಗಡಿಯಾಚೆಗೂ ಪಹರೆಯ ಜಾಗೃತಿ ಮೂಡಿಸಲಾಗುತ್ತಿದೆ" ಎಂದು ಹೇಳಿದರು.
ಇದನ್ನೂ ಓದಿ :ಕಾರವಾರ: ದೇವಸ್ಥಾನಕ್ಕೆ ಜಾಗ ನೀಡದ್ದಕ್ಕೆ ಕುಟುಂಬಕ್ಕೆ ಬಹಿಷ್ಕಾರ ಆರೋಪ