ಕಾರವಾರ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವುದಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಇಂದು ಹೊನ್ನಾವರ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿ ವಿರೋಧ ವ್ಯಕ್ತಪಡಿಸಲಾಯಿತು.
ಶಿವಮೊಗ್ಗದ ಅಂಬುತೀರ್ಥದಲ್ಲಿ ಹುಟ್ಟಿ ಉತ್ತರ ಕನ್ನಡ ಜಿಲ್ಲೆಯ ಮೂಲಕ ಅರಬ್ಬಿ ಸಮುದ್ರ ಸೇರುವ ಶರಾವತಿ ನದಿ ಎರಡು ಜಿಲ್ಲೆಯ ಸಾವಿರಾರು ಕುಟುಂಬಗಳ ಜೀವನದಿ. ಅಲ್ಲದೆ ಪಶ್ಚಿಮ ಘಟ್ಟಗಳಲ್ಲಿ ಸಾವಿರಾರು ಸೂಕ್ಷ್ಮಾತಿ ಸೂಕ್ಷ್ಮ ಜೀವಿಗಳಿಗೂ ಇದು ಆಶ್ರಯ ತಾಣ.
ಆದರೆ ಈ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯಲು ಸರ್ಕಾರ ಮುಂದಾಗಿದೆ. ಈಗಾಗಲೇ ಯೋಜನೆ ರೂಪುರೇಷ ಸಿದ್ಧಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದ್ದು, ಇದು ಶರಾವತಿ ನದಿ ಇಕ್ಕೆಲಗಳ ಜನರ ಆತಂಕಕ್ಕೆ ಕಾರಣವಾಗಿದೆ.
12,500 ಕೋಟಿ ರೂ. ಮೌಲ್ಯದ ಯೋಜನೆ ಇದು ಎನ್ನಲಾಗಿದೆ. ಆದರೆ ಸುಮಾರು 400 ಕಿ.ಮೀ. ದೂರದ ಬೆಂಗಳೂರಿಗೆ ಪೈಪ್ ಲೈನ್ ಮೂಲಕ ನೀರು ಕೊಂಡೊಯ್ಯುವುದು, ಪರಿಸರ ನಾಶ, ವಿದ್ಯುತ್ ಹಾಗೂ ಹಣದ ವ್ಯತ್ಯಯಕ್ಕೆ ಕಾರಣವಾಗಲಿದೆ.
ಈಗಾಗಲೇ ವಿರೋಧದ ನಡುವೆಯೂ ಶಿವಮೊಗ್ಗದ ಲಿಂಗನಮಕ್ಕಿ, ಹೊನ್ನಾವರದ ಗೇರಸೊಪ್ಪ ಬಳಿ ಅಣೆಕಟ್ಟು ನಿರ್ಮಾಣ ಮಾಡಿದ ಕಾರಣ ಸಾವಿರಾರು ಹೆಕ್ಟೇರ್ ಪ್ರದೇಶ ನೀರಿನಲ್ಲಿ ಮುಳುಗಡೆಯಾಗಿದೆ. ಲಕ್ಷಾಂತರ ಜನರು ಇಂದಿಗೂ ಪರಿತಪಿಸುತ್ತಿದ್ದಾರೆ. ಶರಾವತಿ ಹಾಗೂ ಸಮುದ್ರ ದಂಡೆಯಲ್ಲಿ ಬದುಕುತ್ತಿದ್ದ ಮೀನುಗಾರರು ಮತ್ಸ್ಯ ಕ್ಷಾಮದಿಂದ ನಲುಗಿದ್ದಾರೆ.
ಆದರೆ ಇದೀಗ ಇಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಎರಡು ದಂಡೆಯ ಜನರನ್ನು ಮತ್ತೆ ಬೀದಿ ಪಾಲಾಗುವಂತೆ ಮಾಡಲಾಗುತ್ತಿದೆ. ನದಿ ನೀರನ್ನು ನಂಬಿ ಬದುಕುತ್ತಿದ್ದ ಕೃಷಿಕರು ಯೋಜನೆಯಿಂದ ಕೃಷಿ ಬಿಡುವಂತಾಗಿದೆ. ಇಲ್ಲಿನ ಕಾಳು ಮೆಣಸು ಹಾಗೂ ವಿಳ್ಯದೆಲೆ ಮೇಲೆ ಪ್ರಭಾವ ಬೀರಲಿದೆ ಎನ್ನುತ್ತಾರೆ ಜೀವನದಿ ಶರಾವತಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಕೇಶವ ನಾಯ್ಕ.
ಶರಾವತಿ ಜಿಲ್ಲೆಯ ಜೀವನದಿ. ಈ ಭಾಗದ ಜನರು ಇದನ್ನೆ ನಂಬಿ ಕೃಷಿ ಹಾಗೂ ಮೀನುಗಾರಿಕೆ ನಡೆಸುತ್ತಿದ್ದಾರೆ. ಅಲ್ಲದೆ ಹಲವಾರು ಸೂಕ್ಷ್ಮ ಜೀವಿಗಳು ಇಲ್ಲಿ ಬದುಕುತ್ತಿವೆ. ಆದರೆ ಇಂತಹ ನದಿ ನೀರನ್ನು ಅವೈಜ್ಞಾನಿಕವಾಗಿ ಬೆಂಗಳೂರಿಗೆ ಕೊಂಡೊಯ್ಯಲು ಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಜನರೊಂದಿಗೆ ಹೋರಾಟ ನಡೆಸಲಿದ್ದು, ಈ ಬಗ್ಗೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿಯೂ ಧ್ವನಿ ಎತ್ತುತ್ತೇವೆ. ಸರ್ಕಾರ ಯೋಜನೆಯನ್ನು ಕೈ ಬಿಡದೆ ಇದ್ದಲ್ಲಿ ವಿಧಾನಸಭೆಯೊಳಗೆ ಧರಣಿ ನಡೆಸುವುದಾಗಿ ಶಾಸಕ ಸುನೀಲ್ ನಾಯ್ಕ ಹೇಳಿದರು.