ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲ್ಭಾಗ ಸೇರಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಕೋವಿಡ್ ಮುಂಜಾಗ್ರತೆಯೊಂದಿಗೆ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ಜಿಲ್ಲಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಈ ತಾಲೂಕುಗಳ 101 ಗ್ರಾಪಂಗಳಿಗೆ ಇಂದಿನಿಂದಲೇ ಅಧಿಸೂಚನೆ ಹೊರಡಿಸಲಾಗಿದ್ದು, ಡಿ. 11ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಇನ್ನು ಮತದಾನ ಡಿ. 22ರಂದು ನಡೆಯಲಿದೆ. ಮರು ಮತದಾನ ಅವಶ್ಯವಿದ್ದಲ್ಲಿ ಡಿ. 24ರಂದು ನಡೆಯಲಿದೆ ಎಂದರು.
ಜನರು ಮತದಾನದ ಬಗ್ಗೆ ಗೊಂದಲಕ್ಕೊಳಗಾಗಬಾರದು. ಎರಡನೇ ಹಂತದ ಮತದಾನ ಘಟ್ಟದ ಮೇಲ್ಭಾಗದ ತಾಲೂಕುಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾದಲ್ಲಿ ಡಿ. 27ರಂದು ನಡೆಯಲಿದೆ. ಇನ್ನು ಹೊನ್ನಾವರ ತಾಲೂಕಿನಲ್ಲಿ ಮಂಕಿ ವ್ಯಾಪ್ತಿಯ ಗುಳದಕೇರಿ, ಹಳೇಮಠ, ಅನಂತವಾಡಿ, ಚಿತ್ತಾರ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಯನ್ನಾಗಿ ರಚಿಸಿ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಇಲ್ಲಿ ಚುನಾವಣೆ ನಡೆಯುವುದಿಲ್ಲ. ನಗರ ಪ್ರದೇಶಗಳಲ್ಲಿ ಚುನಾವಣೆ ಇಲ್ಲದ ಕಾರಣ ಯಾವುದೇ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಆದರೆ ಗ್ರಾಮೀಣ ಪ್ರದೇಶದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಕಾರ್ಯಕ್ರಮ, ಸಭೆಗಳ ಬಗ್ಗೆ ನಿಗಾ ಇಡಲಾಗುವುದು ಎಂದರು.
ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತೆಯೊಂದಿಗೆ ಚುನಾವಣೆ ನಡೆಸಲಾಗುತ್ತಿದೆ. ಈಗಾಗಲೇ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಿಟರ್ನಿಂಗ್ ಆಫೀಸರ್ ಹಾಗೂ ಅಸಿಸ್ಟೆಂಟ್ ರಿಟರ್ನಿಂಗ್ ಆಫೀಸರ್ ನೇಮಕ ಮಾಡಲಾಗಿದ್ದು, ಚುನಾವಣೆ ಮುಗಿಯುವರೆಗೂ ಅವರೇ ಆ ಪಂಚಾಯಿತಿ ವ್ಯಾಪ್ತಿಯಲ್ಲಿ ನೋಡಿಕೊಳ್ಳಲಿದ್ದಾರೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಅಭ್ಯರ್ಥಿಗಳ ಆಧಾರದ ಮೇಲೆ ನಿರ್ಧರಿಸಿ ಹೆಚ್ಚಿನ ಭದ್ರತೆ ಕಲ್ಪಿಸುವುದಾಗಿ ತಿಳಿಸಿದರು.