ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲೂ ಕೋವಿಶೀಲ್ಡ್ ವ್ಯಾಕ್ಸಿನ್ ವಿತರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಪ್ರಿಯಾಂಗಾ ತಿಳಿಸಿದ್ದಾರೆ.
ಜ.16ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ವೇದಿಕೆಯ ಮೂಲಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಅದೇ ದಿನ ಜಿಲ್ಲೆಯ ನಿಗದಿತ ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ಆರಂಭವಾಗಲಿದೆ. ಈಗಾಗಲೇ ಜಿಲ್ಲೆಗೆ 15,090 ಡೋಸ್ ಲಸಿಕೆ ಹಂಚಿಕೆ ಮಾಡಲಾಗಿದ್ದು, ಈ ಪೈಕಿ ಮೊದಲ ಹಂತದಲ್ಲಿ ಕೋವಿಡ್ ಶೀಲ್ಡ್ನ ಸುಮಾರು 7,000 ಡೋಸ್ ಬುಧವಾರ ರಾತ್ರಿ ಬೆಳಗಾವಿ ವಿಭಾಗದಿಂದ ಲಸಿಕಾ ವ್ಯಾನ್‌ಗಳ ಮೂಲಕ ಜಿಲ್ಲೆಗೆ ಬಂದು ತಲುಪಿದೆ ಎಂದರು.
ಈ ಲಸಿಕೆಯಲ್ಲಿ 190 ಕೇಂದ್ರೀಯ ಆರೋಗ್ಯ ಕಾರ್ಯಕರ್ತರು, 14,660 ರಾಜ್ಯ ಆರೋಗ್ಯ ಕಾರ್ಯಕರ್ತರು, 240 ಸಶಸ್ತ್ರ ಪಡೆಗಳ ವೈದ್ಯಕೀಯ ಸೇವಾ ಕಾರ್ಯಕರ್ತರಿಗೆ ಲಸಿಕೆ ನೀಡಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಸೇರಿ ಸುಮಾರು 14 ಸಾವಿರ ಮಂದಿಯ ಪಟ್ಟಿ ಸಿದ್ಧಪಡಿಸಲಾಗಿದೆ. ಮೊದಲ ಹಂತದಲ್ಲಿ 11 ಲಸಿಕಾ ಕೇಂದ್ರಗಳನ್ನು ಜಿಲ್ಲೆಯಾದ್ಯಂತ ತೆರೆಯಲಾಗಿದ್ದು, ಅಲ್ಲಿ ಪ್ರತಿದಿನ ಒಂದು ಕೇಂದ್ರದಲ್ಲಿ ನೂರರಂತೆ 1,100 ಮಂದಿಗೆ ಪ್ರತಿದಿನ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.
ಒಂದು ಲಸಿಕಾ ಕೇಂದ್ರಕ್ಕೆ ತಲಾ 5 ಮಂದಿ ಸಿಬ್ಬಂದಿಯಂತೆ 515 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ. 105 ಕಡೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲೆಯಲ್ಲಿ 105 ಐಸ್ ಲೈನ್ಡ್ ರೆಫ್ರಿಜರೇಟರ್ (ILR), ಪಶು ಇಲಾಖೆಯ 18 ಸೇರಿ ಒಟ್ಟು 123 ಐಎಲ್ಆರ್ ಫ್ರೀಜರ್‌ಗಳ ವ್ಯವಸ್ಥೆಗಳಿದ್ದು, ಆರೋಗ್ಯ ಇಲಾಖೆಯಿಂದ 1 ಹಾಗೂ ಪಶು ಇಲಾಖೆಯಿಂದ ಪಡೆದ 2 ವಾಕ್ ಇನ್ಕೂಲರ್ಗಳ ಮೂಲಕ ಲಸಿಕೆ ಸರಬರಾಜು ಮಾಡಲಾಗುತ್ತಿದೆ ಎಂದು ವಿವರಿಸಿದರು.