ಕಾರವಾರ: ಬಸ್ ನಿಲ್ದಾಣ ನಿರ್ಮಾಣ ಮಾಡಿಸಿಕೊಡುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ಮನವಿ ಮಾಡಿದ್ರೂ ಅವರು ತಲೆಕೆಡಿಸಿಕೊಳ್ಳದ ಕಾರಣ, ಗ್ರಾಮಸ್ಥರು ತಾವೇ ಬಸ್ ನಿಲ್ದಾಣ ನಿರ್ಮಿಸಿಕೊಂಡಿದ್ದಾರೆ.
ಯಲ್ಲಾಪುರ ತಾಲೂಕಿನ ಹೊಸಳ್ಳಿ ಭಾಗದ ಗ್ರಾಮಸ್ಥರು ಇಂತಹದೊಂದು ಮಾದರಿ ಕಾರ್ಯ ಮಾಡಿದ್ದಾರೆ. ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಮಾರ್ಗದಲ್ಲಿ ತೆರಳುವಾಗ ಗ್ರಾಮದಲ್ಲಿ ಯಾವುದೇ ಬಸ್ ತಂಗುದಾಣದ ವ್ಯವಸ್ಥೆ ಇರಲಿಲ್ಲ. ಇದರಿಂದ ವಿದ್ಯಾರ್ಥಿಗಳು, ಗರ್ಭಿಣಿಯರು ಹಾಗೂ ವಯಸ್ಸಾದವರು ಪರದಾಡುವಂತಾಗಿತ್ತು. ಈ ಬಗ್ಗೆ ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದರಿಂದ ಬೇಸತ್ತಿದ್ದ ಊರ ಜನರೇ ಒಟ್ಟಾಗಿ ಉಸಕು, ಕಲ್ಲು, ಸಿಮೆಂಟ್ ಇತ್ಯಾದಿ ಅಗತ್ಯ ಸಾಮಾನುಗಳನ್ನು ಹೊಂದಿಸಿ ಊರಿನ ಟೈಲ್ಸ್ ಮೇಸ್ತ್ರಿ, ವೆಲ್ಡಿಂಗ್ ವರ್ಕ್ಸ್ ಮತ್ತು ಗೌಂಡಿಗಳ ಸಹಾಯದಿಂದ ಕೇವಲ ಒಂದು ವಾರದಲ್ಲಿ ತಮ್ಮ ಬಿಡುವಿನ ಸಮಯದಲ್ಲಿ ಕೆಲಸ ಮಾಡಿ ಬಸ್ ತಂಗುದಾಣವನ್ನು ನಿರ್ಮಿಸಿದ್ದಾರೆ.
ಅಷ್ಟೇ ಅಲ್ಲದೆ, ಬಸ್ ನಿಲ್ದಾಣದ ಹೊರಗೆ ಊರಿನ ಸಂಸ್ಕೃತಿ, ಬೇಸಾಯ ಮತ್ತು ಹಾಲು ಉತ್ಪಾದನೆ ಕೇಂದ್ರದ ಚಿತ್ರಗಳನ್ನು ಬಿಡಿಸಲಾಗಿದ್ದು, ನೋಡಲು ಆಕರ್ಷಕವಾಗಿದೆ. ವಿಜಯದಶಮಿಯ ಶುಭ ಸಂದರ್ಭದಲ್ಲಿ ಊರಿನ ಹಿರಿಯರು ಈ ತಂಗುದಾಣವನ್ನು ಉದ್ಘಾಟನೆಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.