ಕಾರವಾರ(ಉತ್ತರಕನ್ನಡ) : ಜನರ ವಿಶ್ವಾಸವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಇದೀಗ ಸುಳ್ಳು ಭರವಸೆ ನೀಡುತ್ತಿದೆ. ಇದನ್ನು ಜನ ನಂಬದೆ ಮತ್ತೊಮ್ಮೆ ಡಬಲ್ ಎಂಜಿನ್ ಸರ್ಕಾರ ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಹಟ್ಟಿಕೇರಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಬಳಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಜನರ ಸೇವಕನಾಗಿದ್ದೇನೆ. ನೀವು ಹೇಳಿದ್ದನ್ನು ನಿಮ್ಮ ಸೇವಕನಾಗಿ ಮಾಡುತ್ತಿದ್ದೇನೆ. ನನಗೆ ದೇಶದ 140 ಕೋಟಿ ಜನರು ಯಜಮಾನರು. ನಮಗೆ ಯಾವುದೇ ರಿಮೋಟ್ ಕಂಟ್ರೋಲ್ ಇಲ್ಲ. ಜನರೇ ನನಗೆ ರಿಮೋಟ್ ಕಂಟ್ರೋಲ್ ಆಗಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ : 2018ರ ಬಳಿಕ ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಸರಕಾರ, ಕಾಂಗ್ರೆಸ್ ಮಾಡಿದ ನಷ್ಟ ಸರಿಪಡಿಸುವ ಜೊತೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಕಾಂಗ್ರೆಸ್ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ವಿದೇಶದಿಂದ ಕೇವಲ 30 ಸಾವಿರ ಕೋಟಿ ಹಣ ಹೂಡಿಕೆ ಆಗಿದೆ. ಆದರೆ ಡಬಲ್ ಇಂಜಿನ್ ಸರ್ಕಾರ ಬಂದ ಬಳಿಕ 3 ಪಟ್ಟು ಹೆಚ್ಚು ಅಂದರೆ 90 ಸಾವಿರ ಕೋಟಿ ಹೂಡಿಕೆ ರಾಜ್ಯದಲ್ಲಿ ಆಗುತ್ತಿದೆ. ಉದ್ಯೋಗ, ಅಭಿವೃದ್ಧಿ ಆಗುತ್ತಿದೆ. ಇದು ಬಿಜೆಪಿ ಸರಕಾರ ಅಭಿವೃದ್ಧಿಗೆ ಮೊದಲ ಪ್ರಾಶಸ್ತ್ಯ ನೀಡುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ದಾಖಲೆಯಲ್ಲಿ ಅಸ್ತಿತ್ವದಲ್ಲಿ ಇಲ್ಲದವರಿಗೆ, ಹೆಸರೇ ಇಲ್ಲದವರಿಗೆ ಸೌಲಭ್ಯ ನೀಡುತ್ತಿತ್ತು.ಒಂದು ಲಕ್ಷ ನಕಲಿ ಖಾತೆಗೆ ಸಿಲಿಂಡರ್ ಸಬ್ಸಿಡಿ, ಒಂದು ಕೋಟಿ ನಕಲಿ ಖಾತೆಗೆ ವಿಧವಾ ವೇತನ ಸೇರಿದಂತೆ ಒಟ್ಟು ನಾಲ್ಕು ಕೋಟಿ ನಕಲಿ ಖಾತೆಗೆ ಸರ್ಕಾರದ ವಿವಿಧ ಸಹಾಯಧನ ಕಾಂಗ್ರೆಸ್ ನಾಯಕರಿಗೆ ಹೋಗುತ್ತಿತ್ತು ಎಂದು ಆರೋಪಿಸಿದರು.
ನಾನು ಕಾಂಗ್ರೆಸ್‌ನ ಭ್ರಷ್ಟ ವ್ಯವಸ್ಥೆಯನ್ನು ನಿಯಂತ್ರಿಸಿದ್ದೇನೆ. ಬಡವರಿಗೆ ಸೌಲಭ್ಯ ಸಿಗಲು ಮುಳುವಾಗಿದ್ದ 10 ಕೋಟಿ ನಕಲಿ ಹೆಸರುಗಳನ್ನು ತೆಗೆದು ಹಾಕಿದ್ದೇನೆ. ಇದರಿಂದ ಕಾಂಗ್ರೆಸ್ ನಾಯಕರು ನನ್ನ ಮೇಲೆ ಕೋಪಗೊಂಡಿದ್ದಾರೆ. ಮೂರು ಮುಕ್ಕಾಲು ಲಕ್ಷ ಕೋಟಿ ರೂ. ಹಣ ನಷ್ಟವಾಗುವುದನ್ನು ತಡೆದಿದ್ದೇನೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ : ಕಾಂಗ್ರೆಸ್ ಪರಿವಾರ ಶಾಹಿ ಪಕ್ಷ ದೇಶವನ್ನು ಲೂಟಿ ಮಾಡಿದೆ. ಕಾಂಗ್ರೆಸ್‌ನಲ್ಲಿ ತುದಿಯಿಂದ ಬುಡದವರೆಗೆ ಭ್ರಷ್ಟಾಚಾರ ನಡೆಯುತ್ತದೆ. ಕಾಂಗ್ರೆಸ್ ನನ್ನನ್ನು ಕಂಡರೆ ವಿಷಕಾರುತ್ತದೆ. ಯಾಕೆಂದರೆ ಬಿಜೆಪಿ ಸರ್ಕಾರ ಕಾಂಗ್ರೆಸ್‌ನ ಭ್ರಷ್ಟಾಚಾರದ ಬೇರನ್ನು ಕಿತ್ತು ಹಾಕಿದೆ ಎಂದು ಹೇಳಿದರು. ನಾನು ಬರುವುದಕ್ಕೂ ಮೊದಲು ಸಮುದ್ರ ಇತ್ತು. ಆದರೆ ಈ ಹಿಂದಿನ ಸರ್ಕಾರಗಳಿಗೆ ಮೀನುಗಾರರು ಮಾಡುವ ಕೆಲಸ ಕಣ್ಣಿಗೆ ಕಂಡಿಲ್ಲ. ನಾನು ಅಧಿಕಾರಕ್ಕೆ ಬಂದ ಬಳಿಕ ಮೀನುಗಾರಿಕೆಗೆ ಪ್ರತ್ಯೇಕ ಖಾತೆ ರಚಿಸಲಾಗಿದೆ. ಮೀನುಗಾರರಿಗೆ ಸಹಕಾರಿಯಾಗುವಂತೆ ಮತ್ಯ್ಸ ಸಂಪದ ಯೋಜನೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಜೊತೆಗೆ ಬಿಜೆಪಿ ಅಭ್ಯರ್ಥಿಗಳು ಉಪಸ್ಥಿತರಿದ್ದರು.
ಪದ್ಮಶ್ರೀ ಪುರಸ್ಕೃತರಿಂದ ಆಶೀರ್ವಾದ ಪಡೆದ ಮೋದಿ : ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡ, ತುಳಸಿ ಗೌಡರಿಂದ ಆಶೀರ್ವಾದ ಪಡೆದರು. ಸಾರ್ವಜನಿಕ ಸಭೆಗೂ ಮುನ್ನ ಪದ್ಮಶ್ರೀಗಳನ್ನು ಭೇಟಿಯಾದ ಪ್ರಧಾನಿ ಅವರಿಗೆ ನಮಸ್ಕರಿಸಿದರು. ಈ ವೇಳೆ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ, ಸುಕ್ರಿ ಗೌಡ ಅವರ ಪ್ರಧಾನಿ ಮೋದಿಯ ತಲೆ ಮೈ ಕೈ ಸವರಿ ಶುಭ ಹಾರೈಸಿದರು. ಅಲ್ಲದೆ ತುಳಸಿ ಗೌಡ ಅವರ ಪ್ರಧಾನಿ ಪಾದಕ್ಕೆ ನಮಸ್ಕರಿಸಲು ಮುಂದಾದಾಗ ಪ್ರಧಾನಿಯೇ ತಲೆ ಬಾಗಿ ನಮಸ್ಕರಿಸಿದರು.
ಬಳಿಕ ಸಮಾವೇಶದಲ್ಲಿ ಮಾತನಾಡುವ ವೇಳೆ, ದೇಶದ ಜನತೆಯ ಆಶೀರ್ವಾದ ನನಗೆ ಶಕ್ತಿ ತುಂಬುತ್ತಿದೆ. ಇಂದು ಇಲ್ಲಿಗೆ ಆಗಮಿಸಿದಾಗ ಇಬ್ಬರು ಮಾತೆಯರು ನನಗೆ ಆಶೀರ್ವಾದ ಮಾಡಿದ್ದು ಹೃದಯ ತುಂಬಿ ಬಂತು ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ ಸಂತಸ ವ್ಯಕ್ತಪಡಿಸಿದರು. ಅಂಕೋಲಾ ತಾಲ್ಲೂಕಿನ ಬಡಗೇರಿ ಗ್ರಾಮದ ನಿವಾಸಿಯಾಗಿರುವ ಹಾಲಕ್ಕಿ ಸಮುದಾಯದ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಗೌಡ ಅವರು, ಪ್ರಧಾನಿ ಭೇಟಿಯಿಂದ ಖುಷಿಯಾಯಿತು. ದೆಹಲಿಯಿಂದ ಅಂಕೋಲಾಕ್ಕೆ ಆಗಮಿಸಿದ ವೇಳೆ ನಮ್ಮನ್ನು ಭೇಟಿಯಾಗಿ ಅವರು ಆಶೀರ್ವಾದ ಪಡೆದುಕೊಂಡರು. ನಮ್ಮನ್ನು ನೋಡಿ ಅವರೂ ಖುಷಿಪಟ್ಟರು ಎಂದು ಹೇಳಿದರು.
ಇದನ್ನೂ ಓದಿ : ಡಿ ಕೆ ಶಿವಕುಮಾರ್, ಜಮೀರ್ ಅಹಮದ್ ಖಾನ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ