ಶಿರಸಿ: ಸಾಕಷ್ಟು ಬಾರಿ ದೇಶದ ಜನತೆಯೊಂದಿಗೆ ಬೆರೆತು ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆಯುತ್ತಾರೆ. ಈ ಬಾರಿ ಶಿರಸಿಯ ಮಂಜುಗುಣಿಯ ನಾಗೇಂದ್ರ ಶೇಟ್ ಎಂಬ ಯುವಕನಿಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಅವರ 69ನೇ ಹುಟ್ಟುಹಬ್ಬದ ನಿಮಿತ್ತ ಪತ್ರ ಬರೆದು ಶುಭಾಶಯ ಕೋರಿದ್ದ ನಾಗೇಂದ್ರ ಶೇಟ್ಗೆ ಪ್ರಧಾನಿ ಎರಡು ತಿಂಗಳ ಬಳಿಕ ಪ್ರತಿಕ್ರಿಯಿಸಿದ್ದಾರೆ. ನೀವು ಕಳಿಸಿರುವ ಹುಟ್ಟುಹಬ್ಬದ ಶುಭಾಶಯಗಳನ್ನು ನಾನು ಸ್ವೀಕರಿಸಿದ್ದೇನೆ. ಇದು ನಮ್ಮ ರಾಷ್ಟ್ರ ಸೇವೆಯಲ್ಲಿ ಶ್ರಮಿಸಲು ಒಂದು ಶತಕೋಟಿಗೂ ಅಧಿಕ ಜನರ, ಮಿತಿಯಿಲ್ಲದ ವಾತ್ಸಲ್ಯ ಮತ್ತು ಕಾಳಜಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಶುಭಾಶಯ ನನಗೆ ಬಹಳ ಸಂತೋಷ ತಂದಿದ್ದು, ನಿಮಗೆ ನನ್ನ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಬರೆದಿದ್ದಾರೆ.
ಶ್ರೀಕ್ಷೇತ್ರ ಮಂಜುಗುಣಿ ದೇವಾಲಯದ ಮುಖ್ಯ ವ್ಯವಸ್ಥಾಪಕರಾಗಿರುವ ನಾಗೇಂದ್ರ, ಸೆಪ್ಟೆಂಬರ್ 17ರಂದು ಇಂಗ್ಲಿಷ್ನಲ್ಲಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಶುಭಾಶಯ ತಿಳಿಸಿದ್ದರು. ಪತ್ರದೊಂದಿಗೆ ದೇವರ ಕುಂಕುಮ ಹಾಗೂ ಪ್ರಸಾದವನ್ನು ಸಹ ಕಳುಹಿಸಿದ್ದರು. ಜೊತೆಗೆ ಶ್ರೀಕ್ಷೇತ್ರ ಮಂಜುಗುಣಿಗೆ ಭೇಟಿ ನೀಡುವಂತೆ ಪ್ರಧಾನಿಯವರನ್ನು ಆಹ್ವಾನಿಸಿದ್ದರು.
ಪ್ರಧಾನಿ ಮೋದಿಯವರಿಂದ ಬಂದಿರುವ ಪ್ರತಿಕ್ರಿಯೆಯಿಂದ ಪುಳಕಿತರಾಗಿರುವ ನಾಗೇಂದ್ರ, ಸಾಮಾನ್ಯ ಜನತೆಯೊಂದಿಗೆ ಪ್ರಧಾನಿ ಸಂವಹನ ಮಾಡುತ್ತಿರುವುದು ನಿಜಕ್ಕೂ ತುಂಬಾ ಸಂತಸದ ವಿಚಾರವಾಗಿದೆ ಎಂದರು. ಮೋದಿಯವರ ನೇತೃತ್ವದಲ್ಲಿ ದೇಶ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಆಶಿಸಿದರು.