ಕಾರವಾರ: ಜಿಲ್ಲೆಯ ಕರಾವಳಿ ಭಾಗದಲ್ಲಿ ಸಂಜೆ 7ರ ಸುಮಾರಿಗೆ ಆಕಾಶದಲ್ಲಿ ಪಶ್ಚಿಮ ದಿಕ್ಕಿನಲ್ಲಿ ಅಪರೂಪದ ಸನ್ನಿವೇಶವೊಂದು ಗೋಚರಿಸಿತ್ತು. ಫಳಫಳ ಹೊಳೆಯುವ ಬೆಳಕಿನ ಸರವೊಂದು ಸಾಗುತ್ತಿದ್ದುದನ್ನು ಕಂಡು ಜನ ಅಚ್ಚರಿಗೊಂಡಿದ್ದರು.
ಎಲಾನ್ ಮಸ್ಕ್ ಮಾಲೀಕತ್ವದ ಬಾಹ್ಯಾಕಾಶ ಸಂಸ್ಥೆ ಅಮೆರಿಕದ ‘ಸ್ಪೇಸ್ ಎಕ್ಸ್’ ಉಡಾವಣೆ ಮಾಡಿದ ಸರಣಿ ಉಪಗ್ರಹಗಳ ಮಾಲೆಯಿದು. ‘ಸ್ಟಾರ್ ಲಿಂಕ್’ ಎಂಬ ಯೋಜನೆಯಡಿ 1,800ಕ್ಕೂ ಅಧಿಕ ಉಪಗ್ರಹಗಳನ್ನು ಈಗಾಗಲೇ ಉಡಾವಣೆ ಮಾಡಲಾಗಿದೆ. ಅವುಗಳಲ್ಲಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ.
2018ರ ಫೆ.22ರಂದು ಆರಂಭವಾದ ಈ ಯೋಜನೆಯಲ್ಲಿ ಬೇರೆ ಬೇರೆ ಹಂತಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ. ಅವುಗಳಲ್ಲಿ ಒಂದು ಗುಂಪಿನ ಉಪಗ್ರಹಗಳು ಸಾಗುತ್ತಿದ್ದುದು ಜಿಲ್ಲೆಯ ಆಗಸದಲ್ಲಿ ಸೋಮವಾರ ಗೋಚರಿಸಿತು.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಖಗೋಳ ಅಧ್ಯಯನ ಸಂಸ್ಥೆ ‘ಆಗಸ್ 360’ಯ ಸ್ಥಾಪಕ, ಶಿರಸಿಯ ವಸಂತ ಹೆಗಡೆ ಭೈರುಂಬೆ, ‘ಈ ಉಪಗ್ರಹಗಳ ಮೇಲೆ ಅಳವಡಿಸಲಾಗಿರುವ ಸೌರ ಫಲಕಗಳ ಮೇಲೆ ಕೆಲವು ಕೋನದಲ್ಲಿ ಸೂರ್ಯನ ಕಿರಣಗಳು ಬಿದ್ದಾಗ ಅವು ಪ್ರತಿಫಲಿಸುತ್ತವೆ. ಈ ಉಪಗ್ರಹಗಳು ಭೂಮಿಯಿಂದ ಬಹಳ ಎತ್ತರದ ಕಕ್ಷೆಯಲ್ಲಿಲ್ಲ. ಹಾಗಾಗಿ ಬರಿಗಣ್ಣಿಗೆ ಬಲ್ಬ್‌ನ ಮಾಲೆಯಂತೆ ಕಾಣುತ್ತವೆ ಎಂದರು.
ಇವುಗಳನ್ನು ಕೆಲವರು ಹಾರುವ ತಟ್ಟೆಗಳು ಎಂದು ಆಶ್ಚರ್ಯ ಪಟ್ಟಿದ್ದೂ ಇದೆ. ಸ್ಪೇಸ್ ಎಕ್ಸ್ ಸಂಸ್ಥೆಯು ಮುಂದಿನ ದಿನಗಳಲ್ಲಿ ಮಂಗಳ ಗ್ರಹದ ಮೇಲೆ ಮನುಷ್ಯರನ್ನು ಕರೆದುಕೊಂಡು ಹೋಗಲೂ ಗುರಿ ಹಾಕಿಕೊಂಡಿದೆ’ ಎಂದು ವಿವರಿಸಿದರು.
ಬೆಳಕು ಬೀರುತ್ತ, ನಿಶ್ಶಬ್ದವಾಗಿ ಸಾಗಿದ ಉಪಗ್ರಹಗಳ ದೃಶ್ಯವನ್ನು ಮೊಬೈಲ್ ಫೋನ್‌ಗಳಲ್ಲಿ ಸೆರೆ ಹಿಡಿದ ಜನ ಅಚ್ಚರಿ ವ್ಯಕ್ತಪಡಿಸಿದರು. ಉಪಗ್ರಹಗಳ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.