ಭಟ್ಕಳ: ಕೊರೊನಾ ಲಾಕ್ ಡೌನ್ನಿಂದಾಗಿ ಜಗತ್ತಿನಾದ್ಯಂತ ಜನರು ಕಂಗಾಲಾಗಿದ್ದು, ಜೀವನದ ಗತಿಯನ್ನು ಬದಲಿಸಿಕೊಂಡು ಕೊರೊನಾದೊಂದಿಗೆ ಬದುಕುವುದನ್ನು ಕಲಿಯುತ್ತಿದ್ದಾರೆ. ಜನರು ಒಂದು ರಾಜ್ಯದಿಂದ ಇನ್ನೊಂದಕ್ಕೆ ಹೋಗಬೇಕಾದರೆ ಅಲ್ಲಿನ ಕ್ವಾರಂಟೈನ್ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಲು ಹೆದರುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹಲವು ಕಾರ್ಯಕ್ರಮಗಳು ಈಗ ಆನ್ ಲೈನ್ಲ್ಲೇ ನಡೆಯುತ್ತಿವೆ. ಹೀಗೆಯೇ ಭಟ್ಕಳದ ಯುವಕನೊಬ್ಬ ಬೆಂಗಳೂರಿನಲ್ಲಿದ್ದುಕೊಂಡು ಚೆನ್ನೈನ ವಧುವಿನೊಂದಿಗೆ ಆನ್ ಲೈನ್ ವಿವಾಹವಾಗಿದ್ದಾರೆ. ಈ ಮೂಲಕ ಆನ್‍ಲೈನ್ ವಿವಾಹವಾದ ಭಟ್ಕಳದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಭಟ್ಕಳದ ಮೊದಲ ಮಂತ್ರಿ ದಿ.ಜುಕಾಕೋ ಶಂಶುದ್ದೀನ್ರ ಮರಿಮೊಮ್ಮೊಗ ಮುಹಮ್ಮದ್ ಆದಿಲ್ ಕೌಡ ಮಾಲ್ದೀವ್ಸ್ನಲ್ಲಿ ಪೈಲಟ್ ಆಗಿದ್ದು, ಲಾಕ್ ಡೌನ್ಗಿಂತ ಮೊದಲು ಉಮ್ರಾ ನಿರ್ವಹಿಸಲು ಮಕ್ಕಾಗೆ ತೆರಳುವ ಸಲುವಾಗಿ ಹೆತ್ತವರೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ. ಹೀಗೆ ಬಂದವರು ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆ ಮನೆಗೆ ಹಿಂದಿರುಗಲಾಗದೆ ಬೆಂಗಳೂರಿನಲ್ಲೇ ಸಿಲುಕಿಕೊಂಡಿದ್ದಾರೆ. ಈ ನಡುವೆ ಅವರ ನಿಶ್ಚಿತಾರ್ಥ ಚೆನ್ನೈನ ಆಂಬೂರು ನಿವಾಸಿ ಆಫಿಯಾ ಮರಿಯಮ್ರೊಂದಿಗೆ ಏರ್ಪಟ್ಟಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನೂರಾರು ಕಿ.ಮೀ ದೂರ ಇರುವ ವಧು ಮತ್ತು ವರ ವಿವಾಹಕ್ಕಾಗಿ ಒಂದು ಕಡೆ ಸೇರುವುದು ಕಷ್ಟಕರವಾಗಿರುವ ಹಿನ್ನೆಲೆ, ಶುಕ್ರವಾರ ಆನ್‍ಲೈನ್ ಮೂಲಕ ಅವರಿಬ್ಬರು ಸರಳವಾಗಿ ದಾಂಪತ್ಯಕ್ಕೆ ಕಾಲಿಟ್ಟರು. ನವಜೋಡಿಯ ವಿವಾಹ ಸಮಾರಂಭಕ್ಕೆ ಆನ್ಲೈನ್ನಲ್ಲಿ ನೂರಾರು ಕುಟುಂಬಸ್ಥರು, ಸ್ನೇಹಿತರು ಸಿಸ್ಕೋ ಆ್ಯಪ್ ಮೂಲಕ ಸಾಕ್ಷಿಯಾದರು.
ವರ ಮುಹಮ್ಮದ್ ಆದಿಲ್ ಕೌಡ ಕೆಲ ಸಮಯದಿಂದ ಮಾಲ್ಡೀವ್ಸ್ನಲ್ಲಿ ಪೈಲಟ್ ಆಗಿ ಉದ್ಯೋಗದಲ್ಲಿದ್ದಾರೆ. ಚೆನ್ನೈ ಮತ್ತು ಲಕ್ನೋ ನಂತರ ಮಾಲ್ಡೀವ್ಸ್ನಲ್ಲಿ ಶಿಕ್ಷಣ ಪಡೆದ ಇವರು, ಪೈಲಟ್ ಆದಾಗಿನಿಂದಲೂ ಅಲ್ಲೇ ವಾಸಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಿಲುಕೊಂಡಿದ್ದ ಮಹಮ್ಮದ್ ಆದಿಲ್, ತಮ್ಮ ವಿವಾಹವನ್ನು ಅತ್ಯಂತ ಸರಳವಾಗಿ ನಡೆಸಲು ನಿರ್ಧರಿಸಿ ಆನ್‍ಲೈನ್ ಮೊರೆ ಹೋದರು. ಹಾಗಾಗಿ ಖಾಝಿ ಸಾಹಿಬ್ರನ್ನು ತಮ್ಮ ಮನೆಗೆ ಆಹ್ವಾಸಿ, ನಾಲ್ವರು ಆಪ್ತರೊಂದಿಗೆ ಆನ್ಲೈನ್ಲ್ಲೇ ನಿಖಾಹ್ ನೆರವೇರಿಸಿಕೊಂಡರು.
ಸದ್ಯ ಚೆನ್ನೈನಲ್ಲಿ ವಾಸವಾಗಿರುವ ಭಟ್ಕಳ ಮೂಲದ ಅಬ್ದುಲ್ ರಹೀಂ ಪಟೇಲ್ ಈ ಕುರಿತಂತೆ ಮಾಹಿತಿ ನೀಡಿದ್ದು, ವಿವಾಹದ ಎಲ್ಲಾ ದಾಖಲೆ ಪ್ರಕ್ರಿಯೆಗಳನ್ನು ಈಗಾಗಲೇ ಚೆನ್ನೈನಲ್ಲಿ ಪೂರ್ಣಗೊಳಿಸಲಾಗಿದೆ. ಉಳಿದ ಕೆಲಸಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗಿದೆ. ಇತರ ಪ್ರಮುಖ ವಿಧಿಗಳನ್ನು ಖಾಝಿ ಸಾಹಿಬ್ ಮುಂದೆ ಸಹಿ ಹಾಕುವ ಮೂಲಕ ಮಾಡಲಾಯಿತು ಎಂದರು. ಈ ಸಂದರ್ಭದಲ್ಲಿ ವಿಶ್ವದಾದ್ಯಂತ ಇರುವ ವಧು-ವರರ ಸಂಬಂಧಿಕರು ಮತ್ತು ಸ್ನೇಹಿತರು ವಿವಾಹ ಸಮಾರಂಭದಲ್ಲಿ ಸಿಸ್ಕೊ ಆ್ಯಪ್ ಮೂಲಕವೇ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಮಾದರಿ ಮದುವೆ: ಕೊರೊನಾ ಲಾಕ್‍ಡೌನ್‍ನಿಂದಾಗಿ ಭಟ್ಕಳದಲ್ಲಿ ನಡೆಯಬೇಕಿದ್ದ ನೂರಕ್ಕೂ ಹೆಚ್ಚು ವಿವಾಹಗಳು ಸ್ಥಗಿತಗೊಂಡಿವೆ. ಕೆಲವರು ದಿನಾಂಕಗಳನ್ನು ಫಿಕ್ಸ್ ಮಾಡಿಕೊಂಡಿದ್ದರೂ, ಹೆಚ್ಚು ಜನ ಸೇರುವ ಸಮಸ್ಯೆಯಿಂದಾಗಿ ವಿವಾಹಗಳು ರದ್ದಾಗಿವೆ. ಆನ್‍ಲೈನ್ ವಿವಾಹಗಳಲ್ಲಿ ಯಾವುದೇ ಸಮಸ್ಯೆ ಎದುರಾಗದರು. ಎಷ್ಟು ಸಾವಿರ ಮಂದಿಯಾದರೂ ವಿವಾಹ ಸಮಾರಂಭದಲ್ಲಿ ಭಾಗವಹಿಸಬಹುದು ಮತ್ತು ಇದರಿಂದಾಗಿ ಹಣಕಾಸಿನ ಉಳಿತಾಯವೂ ಆಗುತ್ತದೆ. ಇಂತಹ ವಿವಾಹಗಳನ್ನು ಹೆಚ್ಚೆಚ್ಚು ಪ್ರೋತ್ಸಾಹಿಸಬೇಕು ಎನ್ನುತ್ತಾರೆ ವರ ಆದಿಲ್.