ಕಾರವಾರ (ಉತ್ತರ ಕನ್ನಡ): ಮೂರು ವರ್ಷದಲ್ಲಿ ಮುಗಿಯಬೇಕಿದ್ದ ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣಾ ಕಾಮಗಾರಿ ಕಳೆದ 10 ವರ್ಷದಿಂದ ಕುಂಟುತ್ತಾ ಸಾಗುತ್ತಿದೆ. ಈ ಅರೆಬರೆ ಹೆದ್ದಾರಿ ಕಾಮಗಾರಿಯಿಂದ ಜನಸಾಮಾನ್ಯರು ಹಾಗೂ ನಿತ್ಯ ಸಂಚರಿಸುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕೆ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಇಂದು ಶನಿವಾರ ತಾವೇ ಖುದ್ದಾಗಿ ಈ ಹೆದ್ದಾರಿಯಲ್ಲಿ ಬಸ್ ಮೂಲಕ ಸಂಚರಿಸಿ ಪರಿಶೀಲನೆ ನಡೆಸಿದರು.
ಜಿಲ್ಲೆಯ ಕರಾವಳಿ ತಾಲೂಕಿನ ಉದ್ದಕ್ಕೂ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಅನ್ನು ಚತುಷ್ಪಥಗೊಳಿಸುವ ಕಾಮಗಾರಿ ಕಳೆದ 10 ವರ್ಷಗಳಿಂದ ಗುತ್ತಿಗೆ ಪಡೆದ ಐಆರ್ಬಿ ಕಂಪನಿ ನಡೆಸುತ್ತಿದೆ. ಆರಂಭದಲ್ಲಿ ಕಾಮಗಾರಿಯನ್ನು 3 ವರ್ಷದಲ್ಲಿ ಮುಗಿಸುವಂತೆ ಗುತ್ತಿಗೆ ನೀಡಲಾಗಿತ್ತಾದರೂ ಈವರೆಗೂ ಪೂರ್ಣಗೊಂಡಿಲ್ಲ. ಆದರೆ, ಶೇ. 80 ರಷ್ಟು ಕಾಮಗಾರಿ ಪೂರ್ಣಗೊಳಿಸಿರುವುದಾಗಿ ಹೇಳಿ ದುಪ್ಪಟ್ಟು ಟೋಲ್ ವಸೂಲಿ ಮಾಡುತ್ತಿರುವುದಕ್ಕೆ ಜನರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಇತ್ತೀಚೆಗೆ ಐಆರ್ಬಿ ಹಾಗೂ ಎನ್ಎಚ್ಎಐ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದರು.
ಅಲ್ಲದೇ ಜಿಲ್ಲಾಧಿಕಾರಿಗೆ ಹೆದ್ದಾರಿ ಕಾಮಗಾರಿ ವಾಸ್ತವಿಕ ಸ್ಥಿತಿ ಮತ್ತು ಸಮಸ್ಯೆಗಳನ್ನು ಪಟ್ಟಿ ಮಾಡುವಂತೆ ಸೂಚಿಸಿದ್ದರು. ಅದರಂತೆ ಇಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಐಆರ್ಬಿ, ಎನ್ಎಚ್ಎಐ ಅಧಿಕಾರಿಗಳು, ಪಿಡಬ್ಲ್ಯೂಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಖುದ್ದಾಗಿ ಕಾರವಾರದ ಮಾಜಾಳಿ ಗಡಿಯಿಂದ ಭಟ್ಕಳದ ಗಡಿವರೆಗೂ ಹೆದ್ದಾರಿಯಲ್ಲಿ ಬಸ್ ಮೂಲಕ ಸಂಚರಿಸಿ ಪರಿಶೀಲನೆ ನಡೆಸಿದರು.
ಹೆದ್ದಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ: ಇನ್ನು ಪರಿಶೀಲನೆ ವೇಳೆ ಒಂದೇ ಬಸ್ ಮೂಲಕ ಎಲ್ಲ ಅಧಿಕಾರಿಗಳು ತೆರಳಿ, ಟ್ರಾಫಿಕ್ ಹಾಗೂ ಕರ್ಚು ವೆಚ್ಚವಾಗದಂತೆ ನೋಡಿಕೊಳ್ಳಲಾಗಿದೆ. ಅಲ್ಲದೇ ಸಮಸ್ಯೆ ಇರುವ ಕಡೆ ಬಸ್ ನಿಲ್ಲಿಸಿ ಸಮಸ್ಯೆ ಬಗ್ಗೆ ತಿಳಿದು ಅದಕ್ಕೆ ಪರಿಹಾರ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು. ಹೆದ್ದಾರಿ ಕಾಮಗಾರಿಗೆ ತೆರವುಗೊಂಡ ಬಸ್ ನಿಲ್ದಾಣ, ನೀರು ನಿಂತ ಪ್ರದೇಶ, ಅವೈಜ್ಞಾನಿಕ ತಿರುವು, ಹೆದ್ದಾರಿಯಂಚಿನ ಅಪಾಯಕಾರಿ ಗುಡ್ಡಗಳನ್ನು ಪರಿಶೀಲನೆ ನಡೆಸಿ ಪರಿಹಾರ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇನ್ನು ಈ ಬಗ್ಗೆ ಎನ್ಎಚ್ಎಐ ಅಧಿಕಾರಿಗಳನ್ನು ಕೇಳಿದ್ರೆ ಒಟ್ಟು 187 ಕಿಮೀ ಹೆದ್ದಾರಿ ಪೈಕಿ 179 ಕಿಮೀ ರಸ್ತೆ ಮುಕ್ತಾಯವಾಗಿದೆ. ಆದರೆ, ಸುರಕ್ಷಿತವಲ್ಲದ ಕಾರಣಕ್ಕೆ ಕೆಲವೆಡೆ ಹೆದ್ದಾರಿ ಬಂದ್ ಮಾಡಲಾಗಿದೆ. ಉಳಿದ 2.5 ಕಿಮೀ ಭೂಸ್ವಾದೀನ, ಸೇರಿದಂತೆ ಇನ್ನಿತರ ಕಾರಣಗಳಿಂದ ಬಾಕಿ ಇದ್ದು ಅದನ್ನು ಸರಿಪಡಿಸುವುದಾಗಿ ಹೇಳುತ್ತಾರೆ.
ಹೆದ್ದಾರಿ ಅರೆಬರೆ ಕಾಮಗಾರಿಯಿಂದಾಗಿ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ತಂಡ ಪರಿಶೀಲನೆ ನಡೆಸಿತು. ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಿ, ಹೆದ್ದಾರಿ ಕಾಮಗಾರಿ ಬೇಗ ಮುಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಇದನ್ನೂ ಓದಿ: ಬೆಂಗಳೂರು - ಮೈಸೂರು ಹೈವೇಯ ದುಪ್ಪಟ್ಟು ಟೋಲ್ ವಿರೋಧಿಸಿ ಕರವೇ ಸ್ವಾಭಿಮಾನಿ ಸೇನೆ ಪ್ರತಿಭಟನೆ