ಭಟ್ಕಳ: ನಗರದ ಹೃದಯ ಭಾಗವಾದ ರಾಷ್ಟ್ರೀಯ ಹೆದ್ದಾರಿ- 66ರ ಸಮೀಪದ ಶ್ಯಾನಭಾಗ ರೆಸಿಡೆನ್ಸಿಯಲ್ಲಿ ಯುವಕನೋರ್ವನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಬರ್ಬರ ಹತ್ಯೆಗೈದ ಘಟನೆ ಶನಿವಾರ ರಾತ್ರಿ ನಡೆದಿದೆ.
ಹತ್ಯೆಯಾದ ಯುವಕ ಪುರವರ್ಗದ ಮುಂಗಳಿಹೊಂಡ ನಿವಾಸಿ ಅಫಾನ್ ಜಬಾಲಿ(25) ಎಂದು ತಿಳಿದು ಬಂದಿದೆ. ಈತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಸಂಬಂಧಿಕರ ಮದುವೆಯ ನಿಮಿತ್ತ ಶನಿವಾರ ಬೆಳಿಗ್ಗೆ ಮುಂಬೈನಿಂದ ಭಟ್ಕಳಕ್ಕೆ ಬಂದಿಳಿದಿದ್ದ ಎನ್ನಲಾಗಿದೆ.
ಕುತ್ತಿಗೆ, ಕಾಲುಕಟ್ಟಿ ಹತ್ಯೆಗೈದ ಆರೋಪಿಗಳು
ಯಾವುದೋ ವಿಚಾರಕ್ಕೆ 5-6 ಮಂದಿ ಹೊಟೆಲ್ ರೂಮು ಸೇರಿ ಮಾತುಕತೆ ನಡೆಸಿದ್ದರು. ಮಾತುಕತೆ ವಿಫಲವಾದ ಹಿನ್ನೆಲೆ ನಡೆದ ಗಲಾಟೆ ಅಫಾನ್ಕೊಲೆಯಲ್ಲಿ ಅಂತ್ಯವಾಗಿದೆ. ಯುವಕ ಅಫಾನ್ನನ್ನುಆರೋಪಿಗಳು ಕುತ್ತಿಗೆ, ಕಾಲು ಕಟ್ಟಿ ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಒಬ್ಬ ಆರೋಪಿ
ಆರೋಪಿಗಳು ಆಫಾನ್ನನ್ನು ಕೊಂದು ಹೋಟೆಲ್ನಿಂದ ಪರಾರಿಯಾಗುವ ವೇಳೆ ಇಕ್ಬಾಲ್ ಎಂಬಾತನನ್ನು ಸಾರ್ವಜನಿಕರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆದರೆ ಈತನ ಜೊತೆಗಿದ್ದವರು ಪರಾರಿಯಾಗಿದ್ದಾರೆ. ಪೊಲೀಸರ ವಶದಲ್ಲಿರುವ ಆರೋಪಿ ಇಕ್ಬಾಲ್ ಮೃತ ಆಫಾನ್ ಊರಾದ ಮುಗಳಿಹೊಂಡದವನು ಎನ್ನುವ ಮಾಹಿತಿ ಲಭಿಸಿದ್ದು, ಪರಾರಿಯಾದ ಆರೋಪಿಗಳಲ್ಲಿ 3-4 ಮಂದಿ ಮಂಗಳೂರು ಮೂಲದವರು ಎಂದು ಶಂಕಿಸಲಾಗಿದೆ.
ಯಾವರ ಕಾರಣಕ್ಕೆ ಅಫಾನ್ನನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿಲ್ಲ. ಈ ಘಟನೆ ಭಟ್ಕಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.