ಕಾರವಾರ: ಹಳಿಯಾಳದಲ್ಲಿ ವಾರದ ಹಿಂದೆ ನಡೆದ ಕೊಲೆ ಪ್ರಕರಣವೊಂದನ್ನು ಬೇಧಿಸಿರುವ ಪೊಲೀಸರು ನಾಲ್ಕು ದಿನದಲ್ಲಿ ಆರೋಪಿಯನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಹಳಿಯಾಳ ತಾಲೂಕಿನ ಬೆಳವಟಗಿಯ ಮಾರುತಿ ಮಾದಪ್ಪ ಗೌಡ್ರ ಬಂಧಿತ ಆರೋಪಿ. ಏ.4 ರಂದು ಬೆಳವಟಗಿಯ ನಾಗರಾಜ ಕೊಳದಾರ (31) ಮನೆಯಿಂದ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತೆರಳಿದವನು ನಾಪತ್ತೆಯಾಗಿದ್ದ. ಆದರೆ ಈತನ ಮೃತದೇಹ ಏ.7 ರಂದು ಬೆಳವಟಗಿಯ ಅರಣ್ಯ ಪ್ರದೇಶದ ಬಳಿಯ ಒಣಗಿದ ಹಳ್ಳದಲ್ಲಿ ರುಂಡವಿಲ್ಲದೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಸಿಪಿಐ ಬಿ.ಎಸ್. ಲೋಕಾಪುರ ನೇತೃತ್ವದಲ್ಲಿ ಪಿಎಸ್ ಐ ಯಲ್ಲಾಲಿಂಗ ಕನ್ನೂರು ಸೇರಿದಂತೆ ಪೊಲೀಸರ ತಂಡ ತನಿಖೆ ಕೈಗೊಂಡಿತ್ತು. ಅದರಂತೆ ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿ ಮಾರುತಿಯನ್ನು ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರಹಾಕಿದ್ದ. ನಾಗರಾಜ ಅಣ್ಣನ ಹೆಂಡತಿಯೊಂದಿಗೆ ತಾನು ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಇದಕ್ಕೆ ನಾಗರಾಜ ಅಡ್ಡಿಯಾಗಿದ್ದ. ಈ ಕಾರಣದಿಂದ ಕಟ್ಟಿಗೆ ತೆಗೆದುಕೊಂಡು ಬರಲು ಹೋಗಣವೆಂದು ಕರೆದುಕೊಂಡು ಹೋಗಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.