ಕಾರವಾರ: ಕೊರೊನಾ ವೈರಸ್ ಕುರಿತು ಜವಬ್ದಾರಿಯುತ ಸ್ಥಾನದಲ್ಲಿರುವ ಸಂಸದ ಅನಂತಕುಮಾರ್ ಹೆಗಡೆ ಸೇರಿದಂತೆ ಕೆಲವರು ಬೇಕಾಬಿಟ್ಟಿಯಾಗಿ ಹೇಳಿಕೆ ನೀಡುತ್ತಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ಸಾರ್ವಜನಿಕರ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಒತ್ತಾಯಿಸಿದ್ದಾರೆ.
ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಏಳು ತಿಂಗಳಿಂದ ಕೊರೊನಾ ಕಾರಣದಿಂದಾಗಿ ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ದೇಶದ ಆರ್ಥಿಕ ವ್ಯವಸ್ಥೆ ಕೂಡ ಹದಗೆಟ್ಟಿದೆ. ಈಗಾಗಲೇ ಸಾಕಷ್ಟು ಮಂದಿ ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ವೈದ್ಯರಾದ ತರುಣ್ ಕೋಟಾರಿ, ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ ಬೇಕಾಬಿಟ್ಟಿಯಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸಾರ್ವಜನಿಕ ವೇದಿಕೆಯೊಂದರಲ್ಲಿ ಕೊರೊನಾ ಎಂಬುದು ಸುಳ್ಳು ಎಂದು ಹೇಳುತ್ತಾರೆ. ಆದರೆ ಇವರದೇ ಸರ್ಕಾರ ಇದ್ದು ಇದನ್ನು ಸಂಸತ್ನಲ್ಲಿ ಪ್ರಸ್ತುತ ಪಡಿಸಬೇಕು. ಇಲ್ಲವೇ ವೈದ್ಯರು ವಿಜ್ಞಾನಿಗಳ ಎದುರು ವಾದ ಮಂಡಿಸಿ ಸತ್ಯಾ ಸತ್ಯತೆ ಜನರ ಮುಂದಿಡಬೇಕು ಎಂದರು.
ಬಿಜೆಪಿ ಸರ್ಕಾರದವರೇ ಆಗಿಯೂ ಈ ಬಗ್ಗೆ ಪ್ರಧಾನಿ ಇಲ್ಲವೇ ಸಂಸತ್ನಲ್ಲಿ ಚರ್ಚಿಸದೇ ಸುಮ್ಮನೆ ಪ್ರಚಾರಕ್ಕಾಗಿ ಹೇಳುತ್ತಿರುವಂತಿದೆ. ಆದ್ದರಿಂದ ಇವರ ಹೇಳಿಕೆಗಳ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಅವರ ಹೇಳಿಕೆಗಳನ್ನು ಸಾಬೀತು ಪಡಿಸಲು ಸೂಚಿಸಬೇಕು. ಈ ಸಂಬಂಧ ಇಂದು ಜಿಲ್ಲಾಧಿಕಾರಿ ಮೂಲಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ರಾಷ್ಟ್ರಪತಿ ಪ್ರಧಾನಿ, ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೇಳಿದರು.