ಶಿರಸಿ: ತನ್ನ ಮರಿಯನ್ನು ಕಳೆದುಕೊಂಡಿರುವ ತಾಯಿ ಆನೆಯು ಸಂಕಟದಿಂದ ಮರಿಗಾಗಿ ಅರಣ್ಯ ಪ್ರದೇಶದಲ್ಲಿ ಹುಡುಕಾಡಿದ ಮನಕಲಕುವ ಘಟನೆ ಮುಂಡಗೋಡು ಅರಣ್ಯ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ತಾಲೂಕಿನ ಗುಂಜಾವತಿ ಅರಣ್ಯ ವ್ಯಾಪ್ತಿಯ ಬಾಳೆಹಳ್ಳಿ ಪ್ರದೇಶದಲ್ಲಿ ಮರಿ ಆನೆಯು ಮೃತ ಸ್ಥಿತಿಯಲ್ಲಿ ಕಂಡುಬಂದಿತ್ತು. ಅವಧಿಪೂರ್ವ ಜನಿಸಿದ್ದರಿಂದ ಮರಿ ಆನೆ ಹೊಟ್ಟೆಯಲ್ಲಿ ಸತ್ತಿರಬಹುದು ಎಂದು ವೈದ್ಯರು ಹೇಳಿದ್ದರು.
ಮರಿ ಆನೆಯ ಕಳೆಬರವನ್ನು ನೋಡಲು ಹೋದ ಸಂದರ್ಭದಲ್ಲಿ ತಾಯಿ ಆನೆಯು ಪ್ರತಿರೋಧವನ್ನು ತೋರಿಸಿತ್ತು. ಇದರಿಂದ ಮರಿ ಆನೆಯ ಅಂತ್ಯಕ್ರಿಯೆ ಮಾಡಲು ಅರಣ್ಯ ಅಧಿಕಾರಿಗಳು ಬೇರೆ ಜಾಗವನ್ನು ಗುರುತಿಸಿದ್ದರು.
ಉಗ್ಗಿನಕೇರಿ ಗ್ರಾಮಕ್ಕೆ ಹೋಗುವ ರಸ್ತೆಯ ಇನ್ನೊಂದು ಬದಿಗೆ ಮರಿ ಆನೆಯ ಕಳೆಬರವನ್ನು ಒಯ್ದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಗಿತ್ತು. ಇದರಿಂದ ತನ್ನ ಮರಿ ಆನೆಯ ಕಳೆಬರ ಕಾಣದಿದ್ದಾಗ ತಾಯಿ ಆನೆಯು ತಾನು ಜನ್ಮ ನೀಡಿದ್ದ ಜಾಗದ ಸುತ್ತಲೂ ಓಡಾಡಿದೆ. ಕಣ್ಣೀರಿಡುತ್ತ ಹತ್ತಾರು ಮೀಟರ್ ಸುತ್ತಲೂ ಮರಿ ಆನೆಗೆ ಪರಿತಪಿಸಿದೆ. ಆ ದೃಶ್ಯ ಎಲ್ಲರ ಮನಕಲುಕುವಂತಿತ್ತು.