ಕಾರವಾರ: ಆ ಮಹಿಳೆ ಆದಾಗಲೇ ಮದುವೆಯಾಗಿ ಗಂಡ ಹಾಗೂ ಎರಡು ಮಕ್ಕಳೊಂದಿಗೆ ವಾಸವಾಗಿದ್ದರು. ಆ ಯುವಕ ಎಂಜಿನಿಯರಿಂಗ್ ಮುಗಿಸಿ ಮದುವೆಗಾಗಿ ಕನ್ಯೆ ಹುಡುಕಾಟದಲ್ಲಿರು. ಆದರೆ, ಇವರಿಬ್ಬರಿಗೂ ಬಾಲ್ಯದಿಂದಲೂ ಪರಿಚಯ ಇರುವ ಕಾರಣ ವಿವಾಹಿತ ಮಹಿಳೆ ಮನೆಯವರೇ ಯುವಕನಿಗೆ ಹುಡುಗಿ ಹುಡುಕಾಟದಲ್ಲಿದ್ದರು. ಅಷ್ಟರಲ್ಲಿಯೇ ಯುವಕ ಮನೆಯೊಡತಿಯನ್ನೇ ಪಟಾಯಿಸಿಕೊಂಡು ಕಾರವಾರಕ್ಕೆ ಕರೆತಂದು ಜೀವನ ಕಟ್ಟಿಕೊಳ್ಳತೊಡಗಿದ್ದರು. ಆದರೆ, ವಿವಾಹಿತೆಯ ಮಿಸ್ಸಿಂಗ್ ಜಾಡು ಹಿಡಿದು ಗಡಿ ದಾಟಿ ಬಂದ ಪೊಲೀಸರು ಇದೀಗ ಈ ಜೋಡಿಯನ್ನು ವಶಕ್ಕೆ ಪಡೆದು ವಾಪಸ್ ಕರೆದೊಯ್ದಿದ್ದಾರೆ. ಈ ಕುರಿತ ಇಂಟರೆಸ್ಟಿಂಗ್ ಲವ್ ಕಹಾನಿ ಇಲ್ಲಿದೆ.
ಹೌದು, ಬೀರ್ ಮೊಹಿದ್ದೀನ್ ಎಂಬ ತಮಿಳುನಾಡಿನ ಚೆನ್ನೈ ಮೂಲದ ಯುವಕ ಎಂಜಿನಿಯರಿಂಗ್ ಪದವೀಧರ. ಇದೇ ವೇಳೆ ದೂರದ ಸಂಬಂಧಿ ಅಬ್ದುಲ್ ಖಾದರ್ ಎಂಬಾತ ಈತನಿಗೆ ಯುವತಿಯನ್ನು ಹುಡುಕಿಕೊಡೋದಾಗಿ ಹೇಳಿದ್ದರಿಂದ ಅವರ ಮನೆಗೆ ಬಂದು ಹೋಗುತ್ತಿದ್ದ. ಇದೇ ಅಬ್ದುಲ್‌ನ ಸೊಸೆ 24 ವರ್ಷದ ಆಯಿಷಾ ಹಾಗೂ ಯುವಕ ಬೀರ್ ಮೊಹಿದ್ದೀನ್‌ಗೆ ಬಾಲ್ಯದಿಂದಲೂ ಪರಿಚಯವಿದ್ದು ಮದುವೆಗೂ ಮುನ್ನ ಮನಸ್ಸಿನಲ್ಲಿ ಪ್ರೀತಿಯೂ ಆಗಿತ್ತಂತೆ. ಆದರೆ, ಅವರು ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿದ್ದರಿಂದಾಗಿ ಪ್ರೀತಿ ಮನಸ್ಸಿನಲ್ಲೇ ಕಮರಿಹೋಗಿತ್ತು.
6 ತಿಂಗಳಿನಿಂದ ಕಾರವಾರದಲ್ಲೇ ಜೀವನ: ಆದರೆ, ಯುವಕ ಮದುವೆಗಾಗಿ ಯುವತಿ ಹುಡುಕಾಟದಲ್ಲಿರುವಾಗಲೇ ವಿವಾಹಿತೆ ಆಯಿಷಾ ಮೇಲೆ ಮತ್ತೆ ಮನಸ್ಸಾಗಿದೆ. ತನ್ನ ಇಂಗಿತವನ್ನು ಅವರ ಬಳಿಯೂ ಹೇಳಿಕೊಂಡಿದ್ದು ಕಿರಿವಯಸ್ಸಿನಲ್ಲೇ ಮದುವೆಯಾಗಿದ್ದ ಆಯಿಷಾಗೂ ಪ್ರೇಮಾಂಕುರವಾಗಿದೆ. ಅಂತೆಯೇ ಬೀರ್ ಮೊಹಿದ್ದೀನ್ ಕಳೆದ ಫೆಬ್ರುವರಿಯಲ್ಲಿ ವಿವಾಹಿತೆ ಆಯಿಷಾರನ್ನು ಮನೆ ಬಿಟ್ಟು ಓಡಿಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿಗೂ ಮುನ್ನದ ಮತ್ತೊಂದು ಸಿಸಿಟಿವಿ ದೃಶ್ಯ ಬಹಿರಂಗ
ಬೈಕ್ ಮೇಲೆ ಈ ಜೋಡಿ ಬೆಂಗಳೂರು, ಮಂಗಳೂರು ಮಾರ್ಗವಾಗಿ ಫೆಬ್ರುವರಿ 21ರಂದು ಕಾರವಾರಕ್ಕೆ ಬಂದಿದ್ದು, ಇಲ್ಲಿಯೇ ಬಾಡಿಗೆ ಮನೆ ಪಡೆದು ಉಳಿದುಕೊಂಡಿದ್ದರು. ಅಲ್ಲದೇ ಯುವಕ ಕಟ್ಟಡ ನಿರ್ಮಾಣ ಕೆಲಸಕ್ಕೆ ತೆರಳುತ್ತಿದ್ದು, ಕಳೆದ 6 ತಿಂಗಳಿನಿಂದ ಕಾರವಾರದಲ್ಲೇ ಜೀವನ ನಡೆಸಿಕೊಂಡಿದ್ದರು. ಆದರೆ, ಇತ್ತ ವಿವಾಹಿತೆ ಕಣ್ಮರೆ ಬಗ್ಗೆ ಪತಿ ಮನೆಯ ಕಡೆಯವರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಹುಡುಕಾಟ ಆರಂಭಿಸಿದ ತಮಿಳುನಾಡು ಪೊಲೀಸರು ಇದೀಗ ಕಾರವಾರದಲ್ಲಿ ಜೋಡಿಯನ್ನು ಪತ್ತೆ ಮಾಡಿದ್ದಾರೆ.
ಪತ್ತೆಗೆ ಮೊಬೈಲ್ ಲೋಕೇಶನ್ ನೆರವು: ತಮಿಳುನಾಡು ಪೊಲೀಸರು ಆಯಿಷಾ ಮೊಬೈಲ್ ಟವರ್ ಲೋಕೇಶನ್ ಆಧರಿಸಿ ಪತ್ತೆ ಕಾರ್ಯಕ್ಕೆ ನಡೆಸಿದ್ದು, ಅದು ನೆರವಿಗೂ ಬಂದಿದೆ. ಕಳೆದ ಎರಡು ತಿಂಗಳ ಹಿಂದೆಯೇ ಕಾರವಾರದಲ್ಲಿ ಇರುವುದನ್ನು ಪತ್ತೆ ಹಚ್ಚಿ, ಈ ವೇಳೆ ಕಾರವಾರಕ್ಕೆ ಆಗಮಿಸಿ ಪರಿಶೀಲನೆಯನ್ನೂ ನಡೆಸಿದ್ದರು. ಆದರೆ, ಈಗ ನಿಖರವಾದ ಜಾಗ ತಿಳಿಯದೇ ಪೊಲೀಸರು ವಾಪಸಾಗಿದ್ದರು.
ಹೀಗಾಗಿ ನಂತರ ಕಾರವಾರದ ನಗರ ಠಾಣೆ ಪೊಲೀಸರ ಸಹಕಾರದೊಂದಿಗೆ ವಿವಾಹಿತೆ ಪತ್ತೆಗೆ ಮುಂದಾಗಿದ್ದು, ಈ ಬಾರಿ ವಿವಾಹಿತೆಯ ಲೊಕೇಶನ್ ಆಧರಿಸಿ ನಗರದ ಸೋನಾರವಾಡದಲ್ಲಿ ವಾಸವಾಗಿರುವ ಖಚಿತ ಮಾಡಿಕೊಂಡಿದ್ದಾರೆ. ಅದರಂತೆ ಶನಿವಾರ ಕಾರವಾರಕ್ಕೆ ಆಗಮಿಸಿದ ತಮಿಳುನಾಡು ಪೊಲೀಸರು ಭಾಷೆಯ ಸಮಸ್ಯೆಯಾಗಿದ್ದರಿಂದ ಆಟೋ ಚಾಲಕನೋರ್ವನ ಸಹಕಾರದಿಂದ ವಿವಾಹಿತೆ ಹಾಗೂ ಅವರ ಪ್ರಿಯಕರನನ್ನು ವಶಕ್ಕೆ ತೆಗೆದುಕೊಂಡು ವಾಪಸ್ ಕರೆದೊಯ್ದಿದ್ದಾರೆ.
ಇನ್ನು, ಅಷ್ಟಾದರೂ ವಿವಾಹಿತೆಯೊಂದಿಗೆ ಜೀವನ ನಡೆಸೋದಾಗಿ ಯುವಕ ಪಟ್ಟುಹಿಡಿದಿದ್ದು, ಈಗ ವಿವಾಹಿತೆ ನಿರ್ಧಾರದ ಮೇಲೆ ಇದೀಗ ಜೋಡಿಯ ಭವಿಷ್ಯ ನಿಂತಿದೆ.
ಇದನ್ನೂ ಓದಿ: ಸಂಬಂಧಿಕನಿಂದಲೇ ಯುವತಿಗೆ ಲೈಂಗಿಕ ಕಿರುಕುಳ: ಸಿಡಿಪಿಒರಿಂದ ಸಂತ್ರಸ್ತೆ ರಕ್ಷಣೆ