ಕಾರವಾರ: ಕೋವಿಡ್ನಿಂದಾಗಿ ನಷ್ಟದಲ್ಲಿರುವ ಸಾರಿಗೆ ಇಲಾಖೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಬದ್ಧವಾಗಿರುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದು, ನೌಕರರು ಮುಷ್ಕರವನ್ನು ಕೈ ಬಿಡುವಂತೆ ಕಾರ್ಮಿಕ ಖಾತೆ ಸಚಿವ ಶಿವರಾಮ್ ಹೆಬ್ಬಾರ್ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಕೋವಿಡ್ನಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಸಾರಿಗೆ ಇಲಾಖೆ ನಾಲ್ಕು ಕೋಟಿಯಷ್ಟು ನಷ್ಟ ಅನುಭವಿಸಿದೆ.
ಆದರೆ ಇದೀಗ ಮತ್ತೊಮ್ಮೆ ಕೋವಿಡ್ ಎರಡನೇ ಅಲೆ ಆರಂಭವಾಗಿದ್ದು, ಸಾರಿಗೆ ನೌಕರರು ಈ ರೀತಿ ಪ್ರತಿಭಟನೆ ಮಾಡುವುದು ಸೂಕ್ತವಲ್ಲ. ಸದ್ಯ ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಅದು ಮುಗಿದ ತಕ್ಷಣ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ಹೇಳಿದ್ದಾರೆ.
ಇಷ್ಟಾದರು ಸಾರಿಗೆ ನೌಕರರು ಪ್ರತಿಭಟನೆ ಮಾಡುವುದು ಸೂಕ್ತವಲ್ಲ. ಸಾರಿಗೆ ನೌಕರರ ಈ ರೀತಿಯ ಮುಷ್ಕರದಿಂದಾಗಿ ಸಾರ್ವಜನಿಕರಿಗೂ ಹಾಗೂ ಸ್ವತಃ ಸಾರಿಗೆ ನೌಕರರಿಗೂ ತೊಂದರೆಯಾಗುತ್ತಿದೆ.
ನಿಮ್ಮ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ನಮ್ಮ ಸರ್ಕಾರ ಈಡೇರಿಸಿದ ಮೇಲೂ ಈ ರೀತಿ ಮುಷ್ಕರ ಮಾಡುವುದು ಸರಿಯಲ್ಲ. ಮುಷ್ಕರ ಕೈಬಿಟ್ಟು ಮತ್ತೆ ಕೆಲಸಕ್ಕೆ ಹಾಜರಾಗಿ, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೆಬ್ಬಾರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದರೆ.