ಕಾರವಾರ : ಬಿಜೆಪಿಗರು ಯಡಿಯೂರಪ್ಪನವರನ್ನೇ ಬಿಟ್ಟಿಲ್ಲ, ಇನ್ನು ಅವರ ಮಗನನ್ನು ಬಿಡ್ತಾರಾ?. ಬಿಎಸ್ವೈ ಸಿಎಂ ಆದಾಗ ಕೆಳಗೆ ಇಳಿಸಿದ್ದರು. ಈಗ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡಿ ಶೀಘ್ರದಲ್ಲೇ ಇಳಿಸ್ತಾರೆ. ಬಿಜೆಪಿ ನಾಯಕರೇ ಅಧ್ಯಕ್ಷ ಹುದ್ದೆ ನೇಮಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೀನುಗಾರಿಕಾ ಹಾಗೂ ಬಂದರು ಸಚಿವ ಮಂಕಾಳ ವೈದ್ಯ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಬರ ನಿರ್ವಹಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾವು ಮಾಡುವ ಕೆಲಸವನ್ನು ಅವರ ಪಕ್ಷದ ನಾಯಕರೇ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುತ್ತೇವೆ ಎಂದು ಬಿಜೆಪಿಗರು ಹೇಳುತ್ತಾರೆ. ಕಳೆದ ಬಾರಿ ಮಿಸ್ ಆಗಿ 27 ಸ್ಥಾನ ಗೆದ್ದಿದ್ದರು. ಆದ್ರೆ ಈ ಬಾರಿ ಕಾಂಗ್ರೆಸ್ 28 ಸ್ಥಾನ ಗೆಲ್ಲಲಿದೆ. ನಮ್ಮಲ್ಲಿ 136 ಶಾಸಕರು ಇದ್ದಾರೆ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ ಎಂದರು.
ಕಳೆದ ಬಾರಿ ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿತ್ತು. ಈ ಬಾರಿ ಬಿಜೆಪಿಯು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿಗರು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುತ್ತಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟೀಕೆ ಮಾಡೋದೇ ಕೆಲಸ. ಟೀಕೆ ಮಾಡುವುದನ್ನು ಬಿಟ್ಟು ಬೇರೆ ಏನು ಮಾಡುವುದಿಲ್ಲ. ಕರೆಂಟ್ ಕದ್ದ ಪ್ರಕರಣದಲ್ಲಿ ಯಾವುದೇ ಮುಲಾಜಿಲ್ಲದೆ ನಾವು ಎಫ್.ಐ.ಆರ್ ದಾಖಲು ಮಾಡಿದ್ದೇವೆ ಎಂದು ಹೇಳಿದರು.
ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ : ಕಳೆದ ಆರು ತಿಂಗಳಿಂದ ಅಧಿಕಾರಿಗಳ ಕೆಲಸ ನೋಡಿದ್ದೇನೆ. ನಿಮ್ಮ ಕೆಲಸ ತೃಪ್ತಿ ತಂದಿಲ್ಲ, ನಿಮ್ಮನ್ನು ಸುಧಾರಿಸಲು ಸಾಧ್ಯವಿಲ್ಲ. ಇನ್ನು ಮುಂದೆ ಏನಿದ್ದರೂ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಸದನದ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ : ಬಿ ವೈ ವಿಜಯೇಂದ್ರ
ಕೆಲಸ ಮಾಡಲು ಅವಕಾಶ ಇದ್ದರೂ ಮಾಡುತ್ತಿಲ್ಲ, ಹಲವು ಅಧಿಕಾರಿಗಳು ಜಿಲ್ಲೆಯವರೇ ಇದ್ದಾರೆ. ಮನೆ ಬಾಗಿಲಿನಿಂದ ಓಡಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಆದರೂ ಕೆಲಸ ಮಾಡುವುದಕ್ಕೆ ಏನು ಸಮಸ್ಯೆ. ಬಡವರಿಗೆ ತೊಂದರೆ ಆದರೆ ನಾನು ಯಾವುದೇ ಕಾರಣಕ್ಕೂ ಸುಮ್ಮನೆ ಇರುವುದಿಲ್ಲ. ಅಧಿಕಾರಿಗಳು ಜನರ ತೆರಿಗೆ ಹಣದಿಂದ ಸಂಬಳ ತೆಗೆದುಕೊಳ್ಳುತ್ತೀರಿ. ಜನರಿಗಾಗಿ ಕೆಲಸ ಮಾಡಬೇಕು. ಹೋದ ವರ್ಷ ಎಲ್ಲಿ ಕೆಲಸ ಮಾಡಿದ್ದೀರಿ, ಅಲ್ಲೇ ಕೆಲಸ ಮಾಡುವುದಾದರೆ ನೀವು ಏಕೆ ಇಲ್ಲಿ ಇರಬೇಕು ಎಂದು ಕಿಡಿಕಾರಿದರು.
ಕುಡಿಯುವ ನೀರಿನ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಕಟ್ಟಕಡೆಯ ವ್ಯಕ್ತಿಗೂ ಕುಡಿಯುವ ನೀರು ತಲುಪಬೇಕು. ನೀರಿನ ಸಮಸ್ಯೆ ಇದ್ದಲ್ಲಿ 24 ಗಂಟೆಯೊಳಗೆ ಬಗೆಹರಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಮಂಕಾಳ ವೈದ್ಯ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ನಾನು, ವಿಜಯೇಂದ್ರ ಜೋಡೆತ್ತುಗಳಂತೆ ಕೆಲಸ ಮಾಡುತ್ತೇವೆ, ಲೋಕಸಭೆಯ 28 ಸ್ಥಾನಗಳನ್ನೂ ಗೆಲ್ಲುತ್ತೇವೆ : ಅಶೋಕ್ ವಿಶ್ವಾಸ