ಕಾರವಾರ: ದುಬಾರಿ ಬೆಲೆಯ ಮೊಬೈಲ್ ಕಡಿಮೆ ದರಕ್ಕೆ ನೀಡುವುದಾಗಿ ವೆಬ್‌ಸೈಟ್‌ವೊಂದರಲ್ಲಿ ಪ್ರಕಟಗೊಂಡ ಜಾಹೀರಾತು ನಂಬಿ ಯುವಕನೋರ್ವ ಬರೋಬ್ಬರಿ 1.13 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಕುಮಟಾ ತಾಲ್ಲೂಕಿನ ಚಿತ್ರಗಿಯಲ್ಲಿ ನಡೆದಿದೆ.
ಚಿತ್ರಗಿಯ ಯುವಕ ಚಿನ್ಮಯ ನಾಯ್ಕ ಮಾರ್ಚ್ 17ರಂದು ಮೊಬೈಲ್ ಬಳಕೆ ಮಾಡ್ತಿದ್ದ ವೇಳೆ theonline.shopping ಹೆಸರಿನ ವೆಬ್‌ಸೈಟ್‌ನಲ್ಲಿ 48 ಸಾವಿರ ಮೌಲ್ಯದ Oneplus 8T ಮೊಬೈಲ್‌ನ್ನು ಕೇವಲ 13 ಸಾವಿರಕ್ಕೆ ನೀಡುವುದಾಗಿ ಜಾಹೀರಾತು ಪ್ರಕಟಿಸಲಾಗಿತ್ತು. ಇದನ್ನು ನೋಡಿದ ಬಳಿಕ ಮೊಬೈಲ್ ಆರ್ಡರ್ ಮಾಡಲು ವೆಬ್‌ಸೈಟ್‌ಗೆ ತೆರಳಿದ್ದು, ಅಲ್ಲಿ ವ್ಯಕ್ತಿಯೊಬ್ಬರ ಇನ್‌ಸ್ಟಾಗ್ರಾಂ ಖಾತೆಯ ಲಿಂಕ್ ಸಿಕ್ಕಿತ್ತು. ಈ ವೇಳೆ ಯುವಕ ಮೊಬೈಲ್ ಬೇಕು ಎಂದು ಇನ್‌ಸ್ಟಾಗ್ರಾಂನಲ್ಲಿ ಸಂದೇಶ ರವಾನಿಸಿದ್ದಾರೆ. ಆ ವ್ಯಕ್ತಿ ಮೊದಲು 1,000 ಸಾವಿರ ರೂಪಾಯಿ ಹಣ ಹಾಕುವಂತೆ ತಿಳಿಸಿ ಗೂಗಲ್ ಪೇ ಕ್ಯೂಆರ್ ಕೋಡ್‌ನ್ನು ಕಳುಹಿಸಿಕೊಟ್ಟಿದ್ದನು. ಅದರಂತೆ ಹಣ ಹಾಕಿದ ಬಳಿಕ ದಿನಾಂಕ ಮಾರ್ಚ್18 ರಂದು ಪುನಃ ಉಳಿದ 12,000 ಸಾವಿರ ಹಣವನ್ನ ಪಾವತಿಸುವಂತೆ ತಿಳಿಸಿದ್ದಾನೆ. ಅದರಂತೆ ಚಿನ್ಮಯ ಹಣ ವರ್ಗಾಯಿಸಿದ್ದಾನೆ. ಆದರೆ ಇದಾದ ಬಳಿಕವೂ ಮೊಬೈಲ್ ಡೆಲಿವರಿ ಆಗಿಲ್ಲವಾಗಿದ್ದು, ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿದಾಗ ಮತ್ತೆ 5,000 ಸಾವಿರ ರೂ.ಹಾಕುವಂತೆ ಆ ವ್ಯಕ್ತಿ ಡಿಮಾಂಡ್ ಮಾಡಿದ್ದಾನೆ.
ಇದನ್ನೂ ಓದಿ: ಬೆಳಗಾವಿ ಲೋಕಸಭಾ ಉಪಚುನಾವಣೆ: ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ!
ಇದಕ್ಕೆ ಒಪ್ಪದ ಯುವಕ, ತನಗೆ ಮೊಬೈಲ್ ಬೇಡ ಹಣ ಮರಳಿ ನೀಡುವಂತೆ ತಿಳಿಸಿದಾಗ, ಈತನ ಇನ್‌ಸ್ಟಾಗ್ರಾಂ ಖಾತೆ ಬ್ಲಾಕ್ ಮಾಡಲಾಗಿದೆ. ಬಳಿಕ 7603085526 ನಂಬರ್ನಿಂದ ಕರೆ ಮಾಡಿ ತಾನು theonline.shopping ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ತಾನು ಕಳುಹಿಸುವ ಲಿಂಕ್‌ನ್ನು ಓಪನ್ ಮಾಡಿ ಅದರಲ್ಲಿ ಕೇಳಿರುವ ಬ್ಯಾಂಕ್ ಹೆಸರು, ಮೊಬೈಲ್ ನಂಬರ್, UPI ಪಿನ್ ಸಂಖ್ಯೆಯನ್ನು ತುಂಬಿ 51 ರೂಪಾಯಿ ಕಳುಹಿಸಿ, ತಮ್ಮ ಹಣವನ್ನು ರಿಫಂಡ್ ಮಾಡುವುದಾಗಿ ಹೇಳಿದ್ದಾನೆ. ಇದನ್ನ ನಂಬಿದ ಯುವಕ ಚಿನ್ಮಯ ಲಿಂಕ್‌ನಲ್ಲಿ ಕೇಳಿದ ಎಲ್ಲ ಮಾಹಿತಿಯನ್ನೂ ತುಂಬಿ, 51 ರೂಪಾಯಿ ಪೇ ಮಾಡಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಈತನ ಖಾತೆಯಿಂದ ಎರಡು ಬಾರಿ 49,000 ಸಾವಿರ ರೂಪಾಯಿಯಂತೆ 98,000 ಸಾವಿರ ಹಾಗೂ ನಂತರ 2,000 ಸಾವಿರ ರೂಪಾಯಿ ಖಾತೆಯಿಂದ ವರ್ಗಾವಣೆಯಾಗಿದೆ.
ಆನ್‌ಲೈನ್ ಶಾಪಿಂಗ್ ಹೆಸರಿನಲ್ಲಿ ಇತ್ತ ಮೊಬೈಲ್ ಕೂಡ ಸಿಗದೇ, ಅತ್ತ ಲಕ್ಷಾಂತರ ರೂಪಾಯಿ ಹಣವನ್ನೂ ಕಳೆದುಕೊಂಡ ಬಳಿಕ ಯುವಕನಿಗೆ ಮೋಸ ಹೋಗಿರುವುದು ಅರಿವಾಗಿದೆ. ಈ ಹಿನ್ನಲೆ ಇಂದು ಕಾರವಾರ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.