ಕಾರವಾರ: ಉತ್ತರಕನ್ನಡ ಜಿಲ್ಲೆಯಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಕಳೆದ ಏಳೆಂಟು ವರ್ಷಗಳಿಂದ ಕುಂಟುತ್ತಲೇ ಸಾಗಿದ್ದು, ಈವರೆಗೂ ಪೂರ್ಣಗೊಂಡಿಲ್ಲ.
ನಾಲ್ಕು ಪಥದಿಂದಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಜನತೆ ಆಶಿಸಿದ್ದರು. ಆದರೆ, ಪೂರ್ಣಗೊಳ್ಳದ ಹಾಗೂ ಅಲ್ಲಲ್ಲಿ ಅವೈಜ್ಞಾನಿವಾಗಿ ತಿರುವುಗಳನ್ನು ಮುಂದುವರಿಸಿರುವ ಹೆದ್ದಾರಿ ಕಾಮಗಾರಿಯಿಂದಾಗಿ ಅಪಘಾತಗಳು ಹೆಚ್ಚಾಗಿ, ಪ್ರತಿದಿನವೂ ಸಾವು - ನೋವುಗಳು ಉಂಟಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದ ಪನವೇಲ್‌ನಿಂದ ಕೇರಳದ ಕೊಚ್ಚಿಗೆ ಸಂಪರ್ಕಿಸುವ ಹೆದ್ದಾರಿಯನ್ನ ಚತುಷ್ಪಥಗೊಳಿಸುವ ಕಾಮಗಾರಿ ಉತ್ತರಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ 2014ರಲ್ಲಿ ಆರಂಭವಾಗಿತ್ತು. ಭಟ್ಕಳದಿಂದ ಗೋವಾ ಗಡಿ ಪ್ರದೇಶವಾದ ಕಾರವಾರ ತಾಲೂಕಿನ ಮಾಜಾಳಿಯವರೆಗೆ ಸುಮಾರು 150 ಕಿ.ಮೀ ಉದ್ದದ ಹೆದ್ದಾರಿ ಹಾದುಹೋಗಿದ್ದು.
ಈ ರಸ್ತೆಯನ್ನ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನ ಐಆರ್‌ಬಿ ಸಂಸ್ಥೆ ಗುತ್ತಿಗೆ ಪಡೆದು ಕಾಮಗಾರಿ ಮುಂದುವರಿಸಿದೆ. ಕಂಪನಿ ಕಾಮಗಾರಿ ಆರಂಭಿಸುವ ಮುನ್ನ ನೀಡಿದ್ದ ಭರವಸೆಯಂತೆ 2016-17ರಲ್ಲಿ ಈ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು.
ಶೇ 75ರಷ್ಟೂ ಕಾಮಗಾರಿ ಪೂರ್ಣಗೊಂಡಿಲ್ಲ: ಆದರೆ, ನಿಗದಿತ ಅವಧಿಗಿಂತ ಕಾಮಗಾರಿಗೆ ಸಾಕಷ್ಟು ಹಿನ್ನಡೆಯಾಗಿದ್ದು, ಈವರೆಗೆ ಶೇ.75ರಷ್ಟು ಕಾಮಗಾರಿ ಕೂಡ ಸರಿಯಾಗಿ ಪೂರ್ಣಗೊಂಡಿಲ್ಲ. ಗುತ್ತಿಗೆ ಕಂಪನಿ ಮಾತ್ರ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಜಿಲ್ಲೆಯ ವ್ಯಾಪ್ತಿಯಲ್ಲಿ ಎರಡು ಹಾಗೂ ಜಿಲ್ಲೆಯ ಹೊರಭಾಗದ ಗಡಿಯಲ್ಲಿ ಒಂದು ಸೇರಿ ಒಟ್ಟು 3 ಟೋಲ್‌ಗೇಟ್‌ಗಳನ್ನ ತೆರೆದು ಟೋಲ್ ಸಂಗ್ರಹ ಆರಂಭಿಸಿದೆ.
ಅಲ್ಲಲ್ಲಿ ಹೆದ್ದಾರಿ ಪಕ್ಕದಲ್ಲೇ ಅರ್ಧಂಬರ್ಧ ಗುಡ್ಡ ಕೊರೆದು ತೆರವುಗೊಳಿಸಿರುವುದು ಮಳೆಗಾಲದಲ್ಲಿ ರಸ್ತೆಯ ಮೇಲೆ ಓಡಾಡಲೂ ಭಯದ ವಾತಾವರಣ ಉಂಟುಮಾಡುತ್ತದೆ. ಅವೈಜ್ಞಾನಿಕವಾಗಿ ರಸ್ತೆ ತಿರುವುಗಳನ್ನ ಮಾಡಿ, ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿರುವುದು ಹಾಗೂ ಹೆದ್ದಾರಿಯಲ್ಲಿ ಬೀದಿ ದೀಪಗಳನ್ನ ಪೂರ್ಣವಾಗಿ ಅಳವಡಿಸದಿರುವುದು ಕಾಮಗಾರಿ ಆರಂಭವಾದಾಗಿನಿಂದ ರಸ್ತೆ ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿ ಹೆದ್ದಾರಿ ಕಾಮಗಾರಿ ವಿಳಂಬದಿಂದಲೇ ಸಾಕಷ್ಟು ಅವಘಡಗಳು ಸಂಭವಿಸುತ್ತಿವೆ ಅಂತಾರೇ ಸ್ಥಳೀಯರು.
ಅಪಾಯದ ಭಯದಲ್ಲೇ ಸವಾರರ ಸಂಚಾರ: ಇನ್ನು ಹೆದ್ದಾರಿಯಲ್ಲಿ ಅಲ್ಲಲ್ಲಿ ಅವೈಜ್ಞಾನಿಕ ತಿರುವುಗಳನ್ನ ಮಾಡಿದ್ದು ಅಪೂರ್ಣ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಸಂಚರಿಸುವವರು ಹೆಜ್ಜೆ ಹೆಜ್ಜೆಗೂ ಅಪಾಯದ ಭಯದಲ್ಲೇ ಸಂಚರಿಸಬೇಕಾಗಿದೆ. ವಿವಿಧೆಡೆ ಅಂಡರ್‌ಪಾಸ್, ಫ್ಲೈ ಓವರ್, ಕಾರವಾರದಲ್ಲಿ ಸುರಂಗ ಮಾರ್ಗಗಳನ್ನೂ ರಸ್ತೆ ಕಾಮಗಾರಿಯ ಜೊತೆ ಜೊತೆಗೆ ನಡೆಸಬೇಕಿದೆ. ಇಷ್ಟೆಲ್ಲ ಕಾಮಗಾರಿ ಬಾಕಿ ಇದ್ದು ಪ್ರತಿವರ್ಷ ನೂರಾರು ಅಪಘಾತಗಳಿಂದಾಗಿ ಸಾವು- ನೋವುಗಳು ಉಂಟಾಗುತ್ತಿದ್ದರೂ ಐಆರ್‌ಬಿ ಕಂಪನಿ ಮಾತ್ರ ಕ್ಯಾರೇ ಎನ್ನುತ್ತಿಲ್ಲ.
ಪರಿಣಾಮ ಹೆದ್ದಾರಿ ಸವಾರರು ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಹಿಡಿಶಾಪ ಹಾಕುತ್ತಲೇ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಹೆದ್ದಾರಿಯ ಅಪೂರ್ಣ ಕಾಮಗಾರಿಯಿಂದಾಗಿ ಅಪಘಾತಗಳು ಹೆಚ್ಚಾಗಿರುವುದನ್ನ ಒಪ್ಪಿಕೊಳ್ಳುವ ಜಿಲ್ಲಾಧಿಕಾರಿಗಳು ಕಾಮಗಾರಿಗೆ ಇನ್ನಷ್ಟು ವೇಗ ನೀಡಲು ಸೂಚಿಸುತ್ತೇವೆ ಎನ್ನುತ್ತಾರೆ.
2020 ರಲ್ಲೇ ಉದ್ಘಾಟನೆ: 2020ರಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಈ ಹೆದ್ದಾರಿ ಉದ್ಘಾಟಿಸಿದ್ದರು. 2022ರ ಒಳಗೆ ಕಾಮಗಾರಿ ಪೂರ್ಣಗೊಳ್ಳುವ ಭರವಸೆಯನ್ನೂ ನೀಡಿದ್ದರು. ಆದರೆ, ಈ ವರ್ಷವೂ ಹೆದ್ದಾರಿ ಪೂರ್ಣಗೊಳ್ಳುವ ಯಾವುದೇ ನಿರೀಕ್ಷೆ ಜನರಲ್ಲಿಲ್ಲವಾಗಿದೆ. ಮತ್ತದೇ ಅಪಘಾತ, ಸಾವು- ನೋವುಗಳನ್ನ ಇನ್ನೆಷ್ಟು ವರ್ಷ ಅನುಭವಿಸಬೇಕಾಗಿದೆ ಎನ್ನುವುದು ಉತ್ತರ ಕನ್ನಡಿಗರ ಪ್ರಶ್ನೆಯಾಗಿದ್ದು, ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಹೆಚ್ಚಿನ ಗಮನಹರಿಸಿ ಸುಗಮ ಸಂಚಾರಕ್ಕೆ ಹೆದ್ದಾರಿಯನ್ನ ಅಣಿಗೊಳಿಸಿ ಕೊಡಬೇಕಿದೆ.
ಇದನ್ನೂ ಓದಿ: ಹರ್ಷನ ಅಂತಿಮಯಾತ್ರೆ ವೇಳೆ ಕಲ್ಲು ತೂರಾಟ.. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರಿಂದ ಟಿಯರ್ ಗ್ಯಾಸ್ ಪ್ರಯೋಗ