ಕಾರವಾರ: ಕದ್ರಾ ಜಲಾಶಯದ ಸಮೀಪದಲ್ಲೇ ಮನೆಗಳನ್ನು ಮಾಡಿಕೊಂಡಿದ್ದ ಜನರಿಗೆ, ಜಲಾಶಯದಿಂದ ಏಕಾಏಕಿ ಹೊರಬಿಟ್ಟ ನೀರು ಸೃಷ್ಟಿಸಿದ ಅವಾಂತರದಿಂದ ಕಣ್ಣೀರಿನಲ್ಲಿಯೇ ಕಾಲ ಕಳೆಯುವಂತೆ ಮಾಡಿದೆ. ಒಮ್ಮೆಲೆ ಭಾರಿ ಪ್ರಮಾಣದಲ್ಲಿ ನೀರು ಹೊರಬಿಟ್ಟಿದ್ದರಿಂದ ಹತ್ತಾರು ಮನೆಗಳು ನೆಲಕ್ಕುರುಳಿ ಜನರು ಬೀದಿಯಲ್ಲಿ ನಿಂತು ರೋಧಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಳಿ ನದಿ ಉಕ್ಕಿ ಹರಿದ ಪರಿಣಾಮ ಕಾರವಾರ ತಾಲೂಕಿನ ಹಲವು ಗ್ರಾಮಗಳು ಜಲಾವೃತವಾಗಿ ಜನರು ಪರದಾಡುವಂತಾಗಿದೆ. ಅದರಲ್ಲೂ ಗಾಂಧಿನಗರದಲ್ಲಿ ಸುಮಾರು 20ಕ್ಕೂ ಅಧಿಕ ಮನೆಗಳು ನೆಲಕ್ಕೆ ಉರುಳಿದೆ. ಘಟ್ಟದ ಮೇಲಿನ ತಾಲೂಕುಗಳಲ್ಲಿ ಅಪಾರ ಪ್ರಮಾಣದ ಮಳೆಯಾದ ಹಿನ್ನೆಲೆ ಕಾಳಿ ನದಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಬಂದಿದೆ. ಈ ಹಿನ್ನೆಲೆ ಕದ್ರಾ ಜಲಾಶಯದಿಂದ ಸುಮಾರು 2 ಲಕ್ಷ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗಿತ್ತು.
ಮನೆ ಮೇಲೆ ಕುಳಿತು ಜೀವ ಉಳಿಸಿಕೊಂಡ್ರು:
ಕಳೆದ ಎರಡು ದಿನದಿಂದ ನೀರು ಹೊರಕ್ಕೆ ಬಿಟ್ಟಿದ್ದು, ಗಾಂಧಿ ನಗರದ ಮನೆಗಳ ಬಳಿ ನೀರು ನುಗ್ಗಲು ಪ್ರಾರಂಭಿಸಿದ್ದರಿಂದ ಜನರು ಮನೆಗಳನ್ನು ಬಿಟ್ಟು ಕಾಳಜಿ ಕೇಂದ್ರಗಳತ್ತ ತೆರಳಿದ್ದರು. ಇನ್ನೂ ಕೆಲವರು ಮನೆ ಬಿಟ್ಟು ಬರದೆ ಮನೆಯಲ್ಲಿ ಉಳಿದಿದ್ದರು. ಏಕಾಏಕಿ ನೀರು ಹರಿದ ಕಾರಣ ಜನರು ಜೀವ ಉಳಿಸಿಕೊಳ್ಳಲು ಮನೆ ಮೇಲೆ ಹತ್ತಿ ಕುಳಿತಿದ್ದಾರೆ.
ನೆಲಕ್ಕುರುಳಿತು ಮನೆ-ವಸ್ತುಗಳು ನೀರುಪಾಲು:
ಮನೆ ಮೇಲೆ ಹತ್ತಿ ಕುಳಿತವರನ್ನು ಕೊನೆಗೆ ನೌಕಾನೆಲೆಯ ರಕ್ಷಣಾ ತಂಡವು ಬೋಟ್ ಮೂಲಕ ರಕ್ಷಣೆ ಮಾಡಿತ್ತು. ಆದರೆ ಇದೀಗ ಜಲಾಶಯದಿಂದ ನೀರು ಹೊರಬಿಡುವ ಪ್ರಮಾಣ ಕಡಿಮೆ ಮಾಡಿದ್ದರಿಂದ ಮನೆಗಳ ಬಳಿ ಜನರು ವಾಪಾಸ್ ಆದಾಗ ಮನೆಗಳು ನೆಲಕ್ಕೆ ಉರುಳಿದ ದೃಶ್ಯವನ್ನು ಕಂಡು ಕಂಗಾಲಾಗಿದ್ದಾರೆ. ಕಾಳಿ ನದಿ ಪ್ರವಾಹದಿಂದ ಮನೆಗಳು ನೆಲಕ್ಕೆ ಉರುಳಿ ಮನೆಯಲ್ಲಿದ್ದ ವಸ್ತುಗಳೆಲ್ಲ ಕೊಚ್ಚಿ ಹೋಗಿದೆ. ಮನೆಗಳ ಮುಂದೆ ಜನರು ನಿಂತು ರೋಧಿಸುವ ದೃಶ್ಯ ಎಂತವರ ಕಣ್ಣಲ್ಲೂ ನೀರು ತರೆಸುವಂತಿದೆ.
ಮರುಕಳಿಸಿತು 2019ರ ಪರಿಸ್ಥಿತಿ:
2019ರಲ್ಲಿ ಕಾಳಿ ನದಿಗೆ ಇದೇ ರೀತಿ ಅಪಾರ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಕದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹೊರ ಬಿಟ್ಟು ನೆರೆ ಸೃಷ್ಟಿಯಾಗಿತ್ತು. ನದಿಗೆ ನೀರು ಅಪಾರ ಪ್ರಮಾಣದಲ್ಲಿ ಬರುತ್ತಿರುವುದು ಗೊತ್ತಿದ್ದರೂ ಜಲಾಶಯದಿಂದ ನೀರನ್ನು ಹಂತ ಹಂತವಾಗಿ ಹೊರಬಿಡದೆ ಕೊನೆಗೆ ಒಮ್ಮೆಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಟ್ಟ ಪರಿಣಾಮ ನೆರೆ ಸೃಷ್ಟಿಯಾಗಿ ಹಲವರು ನಿರಾಶ್ರಿತರಾಗಿದ್ದರು. ಈ ಬಾರಿ ಸಹ ಕೆಪಿಸಿ ಅಧಿಕಾರಿಗಳ ನಿರ್ಲಕ್ಷದಿಂದಲೇ ಒಮ್ಮೆಲೆ ನೀರು ಹೊರಬಿಟ್ಟಿದ್ದರಿಂದ ನೆರೆ ಸೃಷ್ಟಿಯಾಗಿದ್ದು, ಮತ್ತೆ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಅಂತ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಮನೆಗಳು ನೆಲಕ್ಕುರುಳಿವೆ. ಕೆಲವು ಭಾಗಶಃ ಹಾನಿಯಾಗಿವೆ. ಸಂಗ್ರಹಿಸಿಟ್ಟ ಅಕ್ಕಿ ಬಟ್ಟೆ ಎಲ್ಲವೂ ನೀರು ಪಾಲಾಗಿದೆ. ಸಾಲ ಮಾಡಿ ಕಟ್ಟಿಕೊಂಡಿದ್ದ ಮನೆ ಸಂಪೂರ್ಣ ನಾಶವಾಗಿದ್ದು, ಕೂಡಲೇ ಸೂಕ್ತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Video: ಪ್ರವಾಹ ಪರಿಸ್ಥಿತಿ.. ಮನೆಗಳ ಮೇಲೆ ಹತ್ತಿ ಜೀವ ಉಳಿಸಿಕೊಂಡ ಕಾರವಾರ ಮಂದಿ
ಇನ್ನು ಕಾಳಿ ನದಿ ಪ್ರವಾಹದಿಂದ ಕಾರವಾರ ತಾಲೂಕಿನ ಕಿನ್ನರ, ಬೈರೆ, ಮಲ್ಲಾಪುರ, ಟೌನ್ ಶಿಪ್, ಕಾರ್ಗೆಜೂಗ ಸೇರಿದಂತೆ ಹತ್ತಾರು ಗ್ರಾಮಗಳು ಜಲಾವೃತವಾಗಿ, ಜನರು ಪರದಾಡುವಂತಾಗಿದೆ. ಸದ್ಯ ಜಲಾಶಯದಿಂದ ಬಿಡುವ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಗ್ರಾಮದಲ್ಲಿ ನುಗ್ಗಿದ ನೀರು ಕಡಿಮೆಯಾಗುತ್ತಿದ್ದು ಜನಜೀವನ ಯಥಾಸ್ಥಿತಿಗೆ ಬರಲು ಇನ್ನೂ ವಾರಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.