ಕಾರವಾರ: ಸೇತುವೆ ಮೇಲೆ ಸಂಚರಿಸುತ್ತಿದ್ದಾಗ ನೀರಿನ ರಭಸಕ್ಕೆ ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ನಾಪತ್ತೆಯಾಗಿದ್ದಾನೆ. ಐವರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ಈ ಘಟನೆ ಯಲ್ಲಾಪುರ ತಾಲೂಕಿನ ಪಣಸಗುಳಿ ಸೇತುವೆ ಮೇಲೆ ಇಂದು ನಡೆಯಿತು.
ಗಂಗಾವಳಿ ನದಿಗೆ ಕಟ್ಟಿರುವ ಸೇತುವೆ ಮೇಲಿನಿಂದ ಚೀರೆಕಲ್ಲು ಅನ್ಲೋಡ್ ಮಾಡಿ ಹಿಂತಿರುಗುತ್ತಿದ್ದ ಲಾರಿಯೊಂದು ನದಿಗೆ ಉರುಳಿದೆ. ಲಾರಿಯಲ್ಲಿದ್ದ 6 ಮಂದಿ ಮುಳುಗಡೆಯಾಗಿದ್ದರು. ಗುಳ್ಳಾಪುರದಲ್ಲಿ ಜನರನ್ನು ಸಾಗಿಸುವ ಬೋಟ್ ಸಹಾಯದಿಂದ ರಾಜೇಶ್ ಹರಿಕಂತ್ರ, ಸುನೀಲ, ರಾಜು, ಶಿವಾನಂದ ಹಾಗು ದಿನೇಶ್ ಎಂಬ ಐವರನ್ನು ರಕ್ಷಣೆ ಮಾಡಲಾಗಿದೆ. ಇನ್ನೋರ್ವ ಸಂದೀಪ ಎಂಬಾತ ಲಾರಿಯೊಳಗಡೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಲಾರಿ ನದಿಗೆ ಬೀಳುತ್ತಿರುವ ದೃಶ್ಯ ವ್ಯಕ್ತಿಯೊಬ್ಬರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೇತುವೆಗೆ ಎರಡೂ ಬದಿ ಯಾವುದೇ ಅಡೆ ತಡೆ ಇಲ್ಲ. ಮಳೆಗಾಲದಲ್ಲಿ ಸೇತುವೆ ಮೇಲೆಯೇ ನೀರು ತುಂಬಿ ಹರಿಯುತ್ತದೆ. ಯಲ್ಲಾಪುರ ಪೊಲೀಸರು ಸ್ಥಳಕ್ಕಾಗಮಿಸಿದ್ದು ಸ್ಥಳೀಯರು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಇದನ್ನೂ ಓದಿ: ಗಣೇಶ ಚತುರ್ಥಿ, ಬಿಬಿಎಂಪಿ ಚುನಾವಣೆ: ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ