ಭಟ್ಕಳ : ಭಟ್ಕಳವನ್ನು ಲಾಕ್ಡೌನ್ ಮಾಡಲಾಗಿದ್ದು, ಜುಲೈ10ರಿಂದ ಇಲ್ಲಿ ಯಾವುದೇ ವ್ಯಾಪಾರ, ವಹಿವಾಟು ನಡೆಸಲು ನಿರ್ಬಂಧ ಹೇರಲಾಗಿದೆ. ಹೊರಗಡೆಯಿಂದ ಯಾರೂ ಬರುವಂತಿಲ್ಲ ಅನ್ನೋ ನೂರಾರು ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಸುಳಿದಾಡುತ್ತಿವೆ. ಇದರಿಂದ ಸಾಮಾನ್ಯ ನಾಗರಿಕರು ಹೈರಾಣಾಗಿದ್ದಾರೆ.
ಹಾಗಾದರೆ ನಿಜ ಏನು..?
ಜುಲೈ10ರಿಂದ ಭಟ್ಕಳ ಪುರಸಭೆ, ಜಾಲಿ ಪಪಂ, ಹೆಬಳೆ ಪಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರು ವಾಸ್ತವ್ಯಕ್ಕೆ ಬರಬಾರದು ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದಕ್ಕೆ ಕಾರಣ ಭಟ್ಕಳದಲ್ಲಿ ಅತಿ ಹೆಚ್ಚಿನ ಪ್ರಕರಣ ಪತ್ತೆಯಾಗುತ್ತಿವೆ. ಅಲ್ಲದೆ ಇಲ್ಲಿ ಬರುವ ಪ್ರಕರಣ ಜಿಲ್ಲಾಡಳಿತಕ್ಕೆ ಹೊಸ ಸವಾಲನ್ನು ಒಡ್ಡುತ್ತಿವೆ. ದುಬೈನಿಂದ ಬಂದವರಿಗೆ 17 ದಿನಗಳ ಬಳಿಕ ಸೋಂಕು ಪತ್ತೆ, ಮದುವೆಯ ಪ್ರಕರಣದಲ್ಲಿ ಸುಮಾರು 70 ಮಂದಿಗೆ ಸೋಂಕು ಪತ್ತೆಯಾಗಿ ಇಬ್ಬರು ಮೃತಪಟ್ಟಿದ್ದಾರೆ.
ಆದ್ದರಿಂದ ಭಟ್ಕಳ, ಜಾಲಿ ಮತ್ತು ಹೆಬಳೆ ಪಂಚಾಯತ್‌ಗೆ ಮಾತ್ರ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಲಾಕ್ಡೌನ್ ಸಡಿಲಿಕೆ ನೀಡಲಾಗಿದೆ. ಆದರೆ, ಇದನ್ನೇ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಯಬಿಡುತ್ತಿರುವುದು ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗಿದೆ.
ಈ ಬಗ್ಗೆ ಭಟ್ಕಳ ಉಪವಿಭಾಗಾಧಿಕಾರಿ ಭರತ ಎಸ್ ಮಾತನಾಡಿ, ಭಟ್ಕಳದಲ್ಲಿ ಈ ಹಿಂದೆ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶದಂತೆ ನಿಯಮಗಳು ಜಾರಿಯಲ್ಲಿರಲಿವೆ. ವಾಸ್ತವ್ಯದ ಉದ್ದೇಶಕ್ಕೆ ಹೊರಗಡೆಯಿಂದ ಭಟ್ಕಳಕ್ಕೆ ಬರುವುದನ್ನು ನಿಷೇಧಿಸಲಾಗಿದೆ. ಶಿರೂರು, ಕುಂಟವಾಣಿ, ಶಿರಾಲಿ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಹೆಚ್ಚಿಸಲಾಗಿದೆ. ಒಂದೊಮ್ಮೆ ಯಾರಾದ್ರೂ ನುಸುಳಿ ಬಂದ್ರೆ ಸಾರ್ವಜನಿಕರು ಅವರ ಸುರಕ್ಷತೆ ದೃಷ್ಟಿಯಿಂದ ಭಟ್ಕಳ ತಹಶೀಲ್ದಾರ್, ಮುಖ್ಯಾಧಿಕಾರಿ, ಎಸಿ ಕಚೇರಿಗೆ ಕರೆ ಮಾಡಿ ತಿಳಿಸಬೇಕು ಎಂದು ಹೇಳಿದ್ದಾರೆ.