ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬಹು ನಿರೀಕ್ಷಿತ ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯನ್ನು 766ಇ ಹಾಗೂ 766ಇಇ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಬೇಲೇಕೇರಿ ಬಂದರಿನವರೆಗೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಹಾಗೂ ಕುಂದಾಪುರದಿಂದ-ಕಾರವಾರದ ಮಾಜಾಳಿಯವರೆಗಿನ ರಾಷ್ಟ್ರೀಯ ಹೆದ್ದಾರಿ 17ಅನ್ನು ರಾಷ್ಟ್ರೀಯ ಹೆದ್ದಾರಿ 66 ಆಗಿ ಪರಿವರ್ತಿಸಿ ಚತುಷ್ಪಥಗೊಳಿಸಿರುವ ಕಾಮಗಾರಿಗೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶನಿವಾರ ಚಾಲನೆ ನೀಡಿದರು.
ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ 440 ಕೋಟಿ ರೂ. ವೆಚ್ಚದ ಶಿರಸಿ- ಕುಮಟಾ- ಬೇಲೇಕೇರಿ ಹೆದ್ದಾರಿ ಕಾಮಗಾರಿ ಸೇರಿದಂತೆ ರಾಜ್ಯದ ಒಟ್ಟು 10,904 ಕೋಟಿ ರೂ. ವೆಚ್ಚದ 1,197 ಕಿ.ಮೀ. ಉದ್ದದ 33 ಬೃಹತ್ ಹೆದ್ದಾರಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ಕಾರ್ಯಕ್ರಮವನ್ನು ಸಚಿವ ಗಡ್ಕರಿ ನೆರವೇರಿಸಿದರು.
ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ನಲ್ಲಿ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಕರ್ನಾಟಕ ರಾಜ್ಯ ವ್ಯಾಪ್ತಿಯ 7,652 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯ ಪೈಕಿ 3,528 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು 4,124 ಕಿ.ಮೀ. ರಾಜ್ಯ ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿದೆ. ರಾಜ್ಯದಲ್ಲಿ ಕಳೆದ ಆರು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಚಿವಾಲಯ 45,000 ಕೋಟಿ ರೂ. ಖರ್ಚು ಮಾಡಿದೆ. 2,400 ಕಿ.ಮೀ. ಉದ್ದದ 37,400 ಕೋಟಿ ರೂ. ವೆಚ್ಚದ 71 ಯೋಜನೆಗಳು ಪ್ರಗತಿಯಲ್ಲಿವೆ. 1,100 ಕೋಟಿ ರೂ. ವೆಚ್ಚದ 39 ಯೋಜನೆಗಳನ್ನು ಮಂಜೂರು ಮಾಡಲಾಗಿದ್ದು, 645 ಕಿ.ಮೀ. ಉದ್ದವನ್ನು ಇದು ಹೊಂದಿದೆ ಎಂದು ತಿಳಿಸಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರೂ ಆಗಿರುವ ಗಡ್ಕರಿ, ಕಬ್ಬನ್ನು ಎಥೆನಾಲ್ ಆಗಿ ಪರಿವರ್ತಿಸುವ ನವೀನ ಕಾರ್ಖಾನೆಗಳನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರವನ್ನು ಕೋರಿದರು. ಕಬ್ಬಿನ ಗಿರಣಿಗಳು ನಿರ್ಣಾಯಕ ಸಮಸ್ಯೆಗಳನ್ನು ಎದುರಿಸುತ್ತಿವೆ ಮತ್ತು ರೈತರು ಕಬ್ಬಿನಿಂದ ಹೆಚ್ಚೇನು ಸಂಪಾದಿಸುತ್ತಿಲ್ಲ. ಸಕ್ಕರೆ ಉತ್ಪಾದನೆಯನ್ನು ಕಡಿಮೆ ಮಾಡುವ ಅನಿವಾರ್ಯತೆಯ ಸಮಯ ಇದು ಎಂದು ಹೇಳಿದರು.