ಕಾರವಾರ: ತೋಟದ ಬಳಿ ಮಣ್ಣಿನ ಕೆಲಸ ಮಾಡುವಾಗ ಗುಡ್ಡದ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಲ್ಲಾಪುರ ತಾಲೂಕಿನ ಇಡಗುಂದಿ ಬಳಿ ನಡೆದಿದೆ.
ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂತೇಬೈಲ್‌ನ ಮಂಜುನಾಥ ಭಟ್ಟ ಎಂಬುವವರ ಮಾಲೀಕತ್ವದ ತೋಟದ ಕೆಲಸಕ್ಕೆಂದು ಏಳು ಮಂದಿ ಕಾರ್ಮಿಕರು ತೆರಳಿದ್ದರು. ಧರೆ ಅಗೆದು ತೋಟಕ್ಕೆ ಮಣ್ಣು ಹಾಕುತ್ತಿದ್ದ ವೇಳೆಗೆ ಮಣ್ಣು ದಿಢೀರ್ ಕಾರ್ಮಿಕರ ಮೇಲೆ ಕುಸಿದಿದೆ.
ಯಲ್ಲಾಪುರ ತಾಲೂಕಿನ ಕಿರವತ್ತಿ ಸಮೀಪದ ಗೌಳಿವಾಡದ ನಿವಾಸಿಗಳಾದ ಭಾಗ್ಯಶ್ರೀ ಎಡಗೆ (21), ಲಕ್ಷ್ಮೀ ಡೋಯಿಪಡೆ (38), ಸಂತೋಷ್ ಡೋಯಿಪಡೆ (18) ಹಾಗೂ ಮಾಳು ಡೋಯಿಪಡೆ (21) ಮಣ್ಣು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ತಗ್ಗಿಬಾಯಿ, ಸೋನಿ ಹಾಗೂ ಬೀರು ಎನ್ನುವವರು ಈ ವೇಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹಗಳನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸುತ್ತಿದ್ದಾರೆ.