ಕಾರವಾರ (ಉತ್ತರ ಕನ್ನಡ) : ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಎರಡು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ತೀವ್ರ ಗೊಂದಲಕ್ಕೆ ಕಾರಣವಾಗಿರುವ ಕುಮಟಾ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಬಾಕಿ ಉಳಿಸಿಕೊಂಡಿದೆ. ಪಟ್ಟಿಯಲ್ಲಿ ಜಿಲ್ಲೆಯ ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಭೀಮಣ್ಣ ನಾಯ್ಕ ಅವರನ್ನು ಹಾಗೂ ಯಲ್ಲಾಪುರ-ಮುಂಡಗೋಡ ಕ್ಷೇತ್ರಕ್ಕೆ ವಿ.ಎಸ್.ಪಾಟೀಲ್ ಅವರ ಹೆಸರನ್ನು ಘೋಷಣೆ ಮಾಡಿದೆ. ಆದರೆ ಈ ಘೋಷಣೆಯಿಂದ ಯಾವುದೇ ವಿರೋಧಗಳು ವ್ಯಕ್ತವಾಗಿಲ್ಲ.
ತೀವ್ರ ಗೊಂದಲದಲ್ಲಿ ಕುಮಟಾ-ಹೊನ್ನಾವರ ಕ್ಷೇತ್ರ : ಅತಿ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ತೀವ್ರ ಗೊಂದಲಕ್ಕೆ ಕಾರಣವಾಗಿರುವ ಕುಮಟಾ-ಹೊನ್ನಾವರ ಕ್ಷೇತ್ರದ ಅಭ್ಯರ್ಥಿ ಘೋಷಣೆಯನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಕ್ಷೇತ್ರದಲ್ಲಿ ಅರ್ಜಿ ಸಲ್ಲಿಸಿದವರ ಪೈಕಿ ಮಾಜಿ ಶಾಸಕಿ ಶಾರದಾ ಶೆಟ್ಟಿ, ಮಂಜುನಾಥ ನಾಯ್ಕ ಹಾಗೂ ಶಿವಾನಂದ ಹೆಗಡೆ ಈ ಮೂವರ ಹೆಸರು ಅಂತಿಮ ಪಟ್ಟಿಗೆ ತೆರಳಿದೆ ಎನ್ನಲಾಗಿತ್ತು. ಆದರೆ ಇದರ ನಡುವೆ ಕಳೆದ ಕೆಲ ದಿನಗಳಿಂದ ಮಾಜಿ ಸಂಸದೆ ಮಾರ್ಗರೇಟ್ ಆಳ್ವಾ ಅವರ ಮಗ ನಿವೇದಿತ್ ಆಳ್ವ ಅವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ : ಜೆಡಿಎಸ್ ತೊರೆದು ಮಾತೃಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮೊಮ್ಮಗ
ಕಾಂಗ್ರೆಸ್‌ಗೆ ಬಂಡಾಯ ಎಚ್ಚರಿಕೆ: ಅಲ್ಲದೆ ಹೊನ್ನಾವರದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿಯನ್ನು ಅವರ ಸ್ಥಾನದಿಂದ ವಜಾ ಕೂಡ ಮಾಡಲಾಗಿತ್ತು. ಇದೇ ಕಾರಣಕ್ಕೆ ಎರಡನೇ ಪಟ್ಟಿಯಲ್ಲೂ ಅಭ್ಯರ್ಥಿ ಘೋಷಣೆ ಮಾಡದೆ ಬಾಕಿ ಉಳಿಸಿಕೊಂಡಿದೆ. ಆದರೆ ಸ್ಥಳೀಯ ಆಕಾಂಕ್ಷಿಗಳನ್ನು ಬಿಟ್ಟು ಬೇರೆಯವರಿಗೆ ನೀಡಿದಲ್ಲಿ ಬಹಿರಂಗವಾಗಿಯೇ ಬಂಡಾಯದ ಎಚ್ಚರಿಕೆ ನೀಡಿರುವುದರಿಂದ ಕಾಂಗ್ರೆಸ್‌ಗೂ ಕೂಡ ಇದು ದೊಡ್ಡ ತಲೆನೋವಾಗಿದೆ ಎಂದೇ ಹೇಳಲಾಗುತ್ತಿದೆ. ಇನ್ನು ಮೊದಲ ಪಟ್ಟಿಯಲ್ಲಿ ಹಳಿಯಾಳ-ಜೋಯಿಡಾ ಕ್ಷೇತ್ರಕ್ಕೆ ಆರ್.ವಿ. ದೇಶಪಾಂಡೆ, ಕಾರವಾರ ಅಂಕೋಲಾಕ್ಕೆ ಸತೀಶ್ ಸೈಲ್, ಭಟ್ಕಳ-ಹೊನ್ನಾವರಕ್ಕೆ ಮಂಕಾಳು ವೈದ್ಯ ಅರ‍್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ : ಟಿಕೆಟ್ ಘೋಷಣೆಗೂ ಮುನ್ನವೇ ಬಂಡಾಯ: ರಾಷ್ಟ್ರೀಯ ಪಕ್ಷಗಳಿಗೆ ತಲೆನೋವಾದ ಕುಮಟಾ ಕ್ಷೇತ್ರ