ಕಾರವಾರ: ತೈಲ ಟ್ಯಾಂಕ್ ಒಡೆದ ವಿಚಾರ ಗಮನಕ್ಕೆ ಬಾರದೆ ಹತ್ತಾರು ಕಿ.ಮೀ ಡೀಸೆಲ್ ಸೋರಿಕೆಯಾಗುತ್ತಲೇ ರೈಲು ಚಲಿಸಿದೆ. ಅದೃಷ್ಟವಶಾತ್ ಪ್ರಯಾಣಿಕರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ಅವಘಡವೊಂದು ತಪ್ಪಿರುವ ಘಟನೆ ಕಾರವಾರ-ಬೆಂಗಳೂರು ಸೆಂಟ್ರಲ್ ರೈಲಿನಲ್ಲಿ ನಡೆದಿದೆ.
ಕಾರವಾರದ ಶಿರವಾಡ ರೈಲು ನಿಲ್ದಾಣದಿಂದ ಹೊರಟಿದ್ದ ಕಾರವಾರ ಬೆಂಗಳೂರು ಸೆಂಟ್ರಲ್ ರೈಲು ಸಂಖ್ಯೆ 16524 ರ ಮುಂಭಾಗದಲ್ಲಿದ್ದ ಎಂಜಿನ್ನ ತೈಲ ಟ್ಯಾಂಕರ್ ಒಡೆದು ಇಂಧನ ಸೋರಿಕೆಯಾಗುತ್ತಲೇ ಸಾಗಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಅಂಕೋಲಾದ ಹಾರವಾಡ ಬಳಿ ಇರುವ ಸುರಂಗ ಮಾರ್ಗದಲ್ಲಿ ತೈಲ ಟ್ಯಾಂಕ್ ಒಡೆದಿದ್ದು, ಅಂಕೋಲಾವರೆಗೂ ಚಲಿಸಿದೆ.
ಆದರೆ, ಹಿಂಬದಿ ಬೋಗಿಗಳಲ್ಲಿ ಕುಳಿತ ಪ್ರಯಾಣಿಕರಿಗೆ ಡೀಸೆಲ್ ಸೋರಿಕೆ ಆಗುತ್ತಿರುವ ಬಗ್ಗೆ ಅನುಮಾನ ಬಂದಿದ್ದು, ಅಂಕೋಲಾದಲ್ಲಿ ರೈಲು ನಿಂತ ಬಳಿಕ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಬಳಿಕ ಪರಿಶೀಲನೆ ನಡೆಸಿದಾಗ ಟ್ಯಾಂಕ್ ಒಡೆದು ಡೀಸೆಲ್ ಸೋರಿಕೆಯಾಗುತ್ತಿರುವುದು ಗೊತ್ತಾಗಿದೆ.
ನಂತರ ಮಂಗಳೂರಿಗೆ ತೆರಳುವ, ಸಾಮಾನ್ಯ ಬೋಗಿಯಲ್ಲಿದ್ದವರನ್ನು ಮಡಗಾಂವ್-ಮಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಕಳುಹಿಸಿಕೊಡಲಾಗಿದೆ. ಕಾರವಾರದಲ್ಲಿದ್ದ ಗೂಡ್ಸ್ ರೈಲಿನ ಬೋಗಿಯನ್ನು ಅಂಕೋಲಾಕ್ಕೆ ತಂದು, ಕಾರವಾರ-ಬೆಂಗಳೂರು ರೈಲಿನ ಎಂಜಿನ್ ಬದಲಿಸಿ ನಂತರ ಕಳುಹಿಸಿಕೊಡಲಾಗಿದೆ. ರೈಲು ಸುಮಾರು 1 ಗಂಟೆ 45 ನಿಮಿಷ ತಡವಾಗಿ ಚಲಿಸಿದೆ.