ಕಾರವಾರ(ಉತ್ತರ ಕನ್ನಡ) : ಕಾರು ಹಾಗೂ ಕೆಎಸ್ಆರ್ಟಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಂಕೋಲಾ ತಾಲೂಕಿನ ಬಾಳೆಗುಳಿ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಮೃತರನ್ನು ತಮಿಳುನಾಡು ಮೂಲದ ಅರುಣ್ ಪಾಂಡ್ಯನ್ (28), ನಿಫುಲ್(27), ಮಹ್ಮದ್ ಬಿಲ್ಲಾಲ್(28), ಶೇಕರನ್(29) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಸ್ನೇಹಿತರಾಗಿದ್ದು, ಚೆನ್ನೈನ ಎಸ್.ಬಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಹೊಸ ವರ್ಷದ ಸಂಭ್ರಮಾಚರಣೆಗೆ ಗೋವಾಕ್ಕೆ ತೆರಳಿದ್ದ ಐವರು ಗೆಳೆಯರು ಕಾರಿನಲ್ಲಿ ವಾಪಸ್ ಗೋಕರ್ಣಕ್ಕೆ ಹೋಗುವಾಗ ಅಪಘಾತ ಸಂಭವಿಸಿದೆ. ಗೋವಾದಿಂದ ಗೋಕರ್ಣಕ್ಕೆ ತೆರಳುವಾಗ ಅಂಕೋಲಾ ತಾಲೂಕಿನ ಬಾಳೆಗುಳಿ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಹೆದ್ದಾರಿಯಲ್ಲಿನ ಡಿವೈಡರ್ ಹಾರಿ ಎದುರಿಗೆ ಬರುತ್ತಿದ್ದ ಸಾರಿಗೆ ಬಸ್ಗೆ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದ ಭೀಕರತೆಗೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಅಂಕೋಲಾ ತಾಲೂಕು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಇನ್ನೋರ್ವನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಹಾಗೂ ಪೊಲೀಸರು ಸೇರಿ ಕಾರಿನಲ್ಲಿ ಸಿಲುಕಿದ್ದ ಎಲ್ಲರನ್ನು ಹೊರ ತೆಗೆದಿದ್ದೇವೆ ಎಂದು ಸ್ಥಳೀಯರಾದ ದರ್ಶನ್ ರಾಮನಾಥ ಮಾಹಿತಿ ನೀಡಿದರು.
ಶನಿವಾರ ರಾತ್ರಿ ಗೋವಾದಲ್ಲಿಯೇ ವಾಸ್ತವ್ಯ ಹೂಡಿ ಪಾರ್ಟಿಯಲ್ಲಿ ಪಾಳ್ಗೊಂಡಿದ್ದ ಯುವಕರು, ಇಂದು ದೇವರ ದರ್ಶನ ಪಡೆಯಲು ಗೋಕರ್ಣಕ್ಕೆ ಬರುತ್ತಿದ್ದರು. ಹೊಸ ವರ್ಷದ ಸಂಭ್ರಮದಲ್ಲಿದ್ದ ಯುವಕರು ಸರಿಯಾಗಿ ನಿದ್ದೆ ಮಾಡದೆ ಕಾರು ಚಲಾಯಿಸುತ್ತಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗ್ತಿದೆ.
ಇನ್ನು, ಈ ಕುರಿತು ಮಾಹಿತಿ ನೀಡಿದ ಸ್ಥಳೀಯರಾದ ವಿಜಯಕುಮಾರ್, ಅಪಘಾತದ ಭೀಕರತೆಯಿಂದ ಕಾರಿನಲ್ಲಿ ಸಿಲುಕಿದ್ದವರನ್ನು ಹೊರ ತೆಗೆಯಲು ಹರಸಾಹಸ ಪಡುವಂತಾಯಿತು. ಹೊಸ ವರ್ಷದಂದು ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಓರ್ವವನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಕೋಲಾದಿಂದ ಕಾರವಾರ ಕ್ರಿಮ್ಸ್ ಗೆ ಕೊಂಡೊಯ್ಯಲಾಗಿದೆ ಎಂದು ಹೇಳಿದರು.
ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಅಂಕೋಲಾ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸ ವರ್ಷಕ್ಕೆ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು ಅಪಾಯಕ್ಕೆ ಆಹ್ವಾನ ಮಾಡಿಕೊಳ್ಳದಂತೆ ನಿಧಾನವಾಗಿ ಸಂಚಾರ ಮಾಡುವಂತೆ ಪೊಲೀಸರು ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಮೈಸೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ; ದ್ವಿಚಕ್ರ ವಾಹನ ಸವಾರ ಸಾವು