ಕಾರವಾರ: ಕಾರವಾರಿಗರ ಮನಕಲಕಿರುವ ಬಾಣಂತಿ ಸಾವಿನ ಪ್ರಕರಣ ತೀವ್ರ ಚರ್ಚೆಗೆ ಕಾರಣವಾಗಿದೆ. ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಈಗಾಗಲೇ ಬೃಹತ್ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಮೊರೆ ಇಟ್ಟಿರುವ ಜನರು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ. ಈ ನಡುವೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ವೇಳೆ ಭಾಗಿಯಾಗಿದ್ದ ಓಟಿ ಟೆಕ್ನಿಷಿಯನ್ ಓರ್ವಳನ್ನು ಪ್ರಕರಣದಡಿ ಸಿಲುಕಿಸುವ ಹುನ್ನಾರ ನಡೆದಿರುವ ಆರೋಪ ಕೇಳಿಬಂದಿದ್ದು, ಪ್ರಕರಣ ಮತ್ತಷ್ಟು ಗಂಭೀರತೆ ಪಡೆದುಕೊಂಡಿದೆ.
ಸೆಪ್ಟೆಂಬರ್ 3 ರಂದು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಸರ್ವೋದಯ ನಗರದ ಬಾಣಂತಿ ಗೀತಾ ಬಾನಾವಳಿಕರ್ ಸಾವಿಗೆ ಕಾರವಾರದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಆರೋಗ್ಯವಾಗಿದ್ದ ಬಾಣಂತಿ ಗೀತಾಗೆ ವೈದ್ಯರು ನಿರ್ಲಕ್ಷ್ಯದಿಂದ ನೀಡಿದ ಅನಸ್ತೇಶಿಯಾ ಓವರ್ ಡೋಸ್ ಆದ ಪರಿಣಾಮ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಮೀನುಗಾರರ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದ್ದರು. ಮಾತ್ರವಲ್ಲದೆ ವೈದ್ಯರನ್ನು ಅಮಾನತುಗೊಳಿಸಿ ಸಾವಿಗೆ ನ್ಯಾಯ ಕೊಡಿಸುವುವಂತೆ ಒತ್ತಾಯಿಸಿದ್ದರು.
ಆದರೆ ಇದೀಗ ವೈದ್ಯರು ಪ್ರಕರಣವನ್ನು ಹಾದಿ ತಪ್ಪಿಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಆಪರೇಶನ್ ಥಿಯೇಟರ್ ನಲ್ಲಿದ್ದ ಓಟಿ ಟೆಕ್ನಿಷಿಯನ್ ಓರ್ವಳಿಗೆ ಅನಸ್ತೇಶಿಯಾ ನಾನೇ ನೀಡಿರುವುದಾಗಿ ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗ್ತಿದೆಯಂತೆ. ಇದೀಗ ಸ್ವತಃ ಆ ಯುವತಿಯೇ ಆತಂಕಗೊಂಡು ತನಿಖಾಧಿಕಾರಿ ಬಳಿ ದೂರು ಸಲ್ಲಿಸಿದ್ದಾಳೆ. ನಾನು ಆಪರೇಶನ್ ಥಿಯೇಟರ್ ನಲ್ಲಿ ಕೇವಲ ಸಹಾಯಕಿ ಆಗಿದ್ದೇನೆ. ಆದರೆ ಇದೀಗ ಆಸ್ಪತ್ರೆಯಲ್ಲಿರುವ ಇತರೆ ವೈದ್ಯರು ಕಚೇರಿಗೆ ಕರೆಸಿ ಅನಸ್ತೇಶಿಯಾ ನೀಡಿರುವುದಾಗಿ ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ನನಗೆ ತೀವ್ರ ಭಯವಾಗುತ್ತಿದ್ದು, ಕೆಲಸಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ದೂರು ಸಲ್ಲಿಸಿದ್ದಾಳೆ.
ಅನಸ್ತೇಶಿಯಾ ಬಗ್ಗೆ ಓದಿಕೊಂಡು ಕೇಸ್ ಸೀಟ್ ನಲ್ಲಿ ಬರೆಯುವಂತೆ ಹೇಳಿದ್ದಾರೆ. ನೀನು ಕೂಡ ಮೀನುಗಾರ ಸಮುದಾಯದವಳೇ ಆಗಿರುವುದರಿಂದ ಏನು ಸಮಸ್ಯೆಯಾಗುವುದಿಲ್ಲ ಎಂದು ಹೇಳಿ ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ ಎಂದು ದೂರು ನೀಡಿದ್ದಾರೆ. ಇನ್ನು ಅರವಳಿಕೆ ತಜ್ಞರಿದ್ದರು ಅನಸ್ತೇಶಿಯಾಯವನ್ನು ಜಿಲ್ಲಾ ಸರ್ಜನ್ ಶಿವಾನಂದ ಕುಡ್ತಲ್ಕರ್ ಅವರೇ ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಇದೀಗ ತನಿಖೆಯ ದಿಕ್ಕನ್ನು ತಪ್ಪಿಸಿ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ತಬ್ಬಲಿ ಮಕ್ಕಳಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಬಾಣಂತಿ ಗೀತಾ ಸಾವಿಗೆ ನ್ಯಾಯ ಸಿಗಬೇಕು. ಅಲ್ಲದೆ ಸಾವಿನ ಪ್ರಕರಣವನ್ನು ಯುವತಿ ತಲೆಗೆ ಕಟ್ಟುವ ಹುನ್ನಾರ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಇದನ್ನು ನಾವು ಒಪ್ಪುವುದಿಲ್ಲ. ಕೂಡಲೇ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೀನುಗಾರರು ಆಗ್ರಹಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ತನಿಖೆಯ ದಿಕ್ಕು ತಪ್ಪಿಸುವ ಬಗ್ಗೆ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದು, ಕೂಡಲೇ ತನಿಖೆಯನ್ನು ಚುರುಕುಗೊಳಿಸಿ ಬಾಣಂತಿ ಸಾವಿಗೆ ನ್ಯಾಯ ಒದಗಿಸುವಂತೆ ತನಿಖಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಎಂ ರೋಶನ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಒಟ್ಟಾರೆ ಬಾಣಂತಿ ಸಾವಿನ ತನಿಖೆ ಶುರುವಾಗುವ ಮುಂಚೆ ಇದೀಗ ಓಟಿ ಟೆಕ್ನಿಷಿಯನ್ ಓರ್ವಳ ಮೇಲೆ ಒತ್ತಡ ಹೇರುತ್ತಿರುವ ಆರೋಪ ಕೇಳಿ ಬಂದಿದೆ. ಆದಷ್ಟು ಬೇಗ ತನಿಖೆ ಆರಂಭಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.