ಕಾರವಾರ: ಲಕ್ಷಾಂತರ ಗಿಡಗಳನ್ನು ನೆಟ್ಟು ವೃಕ್ಷಮಾತೆ ಎನಿಸಿಕೊಂಡ ತುಳಸಿ ಗೌಡ ಅವರಿಗೂ ಭಾರಿ ಮಳೆಯಿಂದ ಸಂಕಷ್ಟ ಎದುರಾಗಿದೆ. ಮನೆ ಮುಂಭಾಗ ಹರಿಯುವ ಸಣ್ಣ ಹಳ್ಳಕ್ಕೆ ಸೇತುವೆ ಇಲ್ಲದೇ ಸಮಸ್ಯೆಯಾಗಿದೆ. ಇದರ ಬಗ್ಗೆ ಈ ಹಿಂದೆ ಬೇರೆ ಬೇರೆ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಫಲವಾಗದ ಕಾರಣ ನೇರ ಮುಕ್ಯ ಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.
ಅಂಕೋಲಾ ತಾಲೂಕಿನ ಹೊನ್ನಳ್ಳಿ ಎಂಬ ಪುಟ್ಟ ಗ್ರಾಮದ ಹಾಲಕ್ಕಿ ಸಮುದಾಯದ ತುಳಸಿ ಗೌಡ ದೇಶದ ಅತ್ಯುನ್ನತ ನಾಗರಿಕ ಸಮ್ಮಾನಗಳಲ್ಲೊಂದಾದ ಪದ್ಮಶ್ರೀ ಪುರಸ್ಕಾರಕ್ಕೊಳಗಾಗಿದ್ದಾರೆ. ಎಷ್ಟೇ ದೊಡ್ಡ ಮಟ್ಟದ ಪ್ರಶಸ್ತಿ ಸ್ವೀಕರಿಸಿದರೂ ತಮ್ಮ ಪಾಲಿಗೆ ಬದುಕಲು ಸೂಕ್ತ ಮೂಲ ಸೌಕರ್ಯವಿಲ್ಲದೇ ಪರದಾಡಬೇಕಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಅಂಕೋಲಾದ ಹೊನ್ನಳ್ಳಿಯಲ್ಲಿರುವ ಮನೆ ಎದುರು ಸಣ್ಣ ಹಳ್ಳವೊಂದು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ನಿತ್ಯ ಪೇಟೆಗಾಗಲಿ, ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಾಗಲಿ, ಮಕ್ಕಳಿಗೆ ಶಾಲೆಗಾಗಲಿ ಹೋಗಬೇಕಾದರೆ ಜೀವಭಯದಲ್ಲೇ ದಾಟಿ ಹೋಗಬೇಕಿದೆ. ಪದ್ಮಶ್ರೀ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ತುಳಸಜ್ಜಿಯವರನ್ನ ಭೇಟಿಯಾಗಿದ್ದ ಅಧಿಕಾರಿಗಳಿಗೆ ಈ ಮಳೆಗಾಲದ ಸಮಸ್ಯೆಯ ಬಗ್ಗೆ ಅಜ್ಜಿ ಗಮನಕ್ಕೆ ತಂದಿದ್ದರಂತೆ. ಒಂದು ಸಣ್ಣ ಕಾಲುಸಂಕವನ್ನಾದರೂ ನಿರ್ಮಿಸಿಕೊಡಲು ಮನವಿ ಮಾಡಿಕೊಂಡಿದ್ದರಂತೆ. ಆದರೆ, ಯಾರೂ ಕೂಡ ಈವರೆಗೆ ಕಿವಿ ಕೊಟ್ಟಿಲ್ಲ ಎಂದು ತುಳಸಜ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ತಾತ್ಕಾಲಿಕ ವ್ಯವಸ್ಥೆ ಶಾಸಕಿ ಭರವಸೆ : ಪದ್ಮಶ್ರೀ ತುಳಸಿ ಗೌಡ ಅವರ ನಿವಾಸ ಸಂಪರ್ಕಿಸುವ ಕಿರು ಸೇತುವೆಗೆ 25 ಲಕ್ಷ ರೂ. ಹಾಗೂ ರಸ್ತೆಗೆ 15 ಲಕ್ಷ ರೂ. ಮಂಜೂರಾಗಿದ್ದು, ಮಳೆಗಾಲದ ತರುವಾಯ ಕಾಮಗಾರಿ ಶುರುವಾಗಲಿದೆ. ತುಳಸಿ ಗೌಡ ಅವರ ಸಂಚಾರಕ್ಕಾಗಿ ತಾತ್ಕಾಲಿಕ ಸೇತುವೆಯನ್ನು ವಾರದೊಳಗೆ ನಿರ್ಮಿಸಲಾಗುವುದು ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಭರವಸೆ ನೀಡಿದ್ದಾರೆ.
ತುಳಸಿ ಗೌಡ ಅವರ ನಿವಾಸದ ಬಳಿ ಸೇತುವೆ ಹಾಗೂ ರಸ್ತೆಗಾಗಿ 40 ಲಕ್ಷ ರೂ. ಮಾರ್ಚ 2022ರಲ್ಲೇ ಮಂಜೂರಾಗಿದೆ. ಇದನ್ನು ತಾವು ತುಳಸಿ ಗೌಡ ಅವರ ಗಮನಕ್ಕೂ ತಂದಿದ್ದೆ. ಆದರೆ, ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭವಾಗಿಲ್ಲ. ನಂತರ ಮಳೆ ಬಂದಿದ್ದರಿಂದ ಮತ್ತೆ ವಿಳಂಬವಾಯಿತು ಎಂದು ಶಾಸಕಿ ಹೇಳಿದ್ದಾರೆ.
ಇದನ್ನೂ ಓದಿ: ಆ ಶಿಕ್ಷಕ ನಮ್ಮನ್ನು ನೋಡಬಾರದ ರೀತಿಯಲ್ಲಿ ನೋಡ್ತಾನೆ: ಶಿಕ್ಷಕಿಯರ ಗಂಭೀರ ಆರೋಪ