ಕಾರವಾರ: ಕೊರೊನಾ ಅಟ್ಟಹಾಸ ಹಿನ್ನೆಲೆಯಲ್ಲಿ ಲಾಕ್‌ಡೌನ್ ಹೇರಿಕೆಯಿಂದಾಗಿ ನೆಲಕಚ್ಚಿದ್ದ ಪ್ರವಾಸೋದ್ಯಮ ಸದ್ಯ ಚೇತರಿಸಿಕೊಳ್ಳುತ್ತಿದೆ. ಪ್ರವಾಸಿಗರ ಆಗಮನವೂ ಪ್ರಾರಂಭ ಆಗಿರುವುದರಿಂದ ಪ್ರವಾಸಿ ತಾಣಗಳೂ ಚೇತರಿಸಿಕೊಳ್ಳುತ್ತಿವೆ. ತಾಣಗಳು ಮೊದಲಿನಂತೆ ರಂಗು ಪಡೆದುಕೊಳ್ಳುತ್ತಿವೆ. ಆದ್ರೆ ಪ್ರವಾಸಕ್ಕೆಂದು ಬಂದು ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡಿದ್ದ ವಿದೇಶಿ ಪ್ರವಾಸಿಗರು ಮಾತ್ರ ಸ್ವದೇಶಕ್ಕೆ ಮರಳಲಾಗದೆ ಪರದಾಡುತ್ತಿದ್ದಾರೆ.
ದಕ್ಷಿಣಕಾಶಿ ಎಂದೇ ಪ್ರಸಿದ್ಧಿಯಾಗಿರುವ ಕುಮಟಾ ತಾಲ್ಲೂಕಿನ ಗೋಕರ್ಣ ಧಾರ್ಮಿಕ ಹಾಗೂ ಪ್ರವಾಸೋದ್ಯಮದಿಂದಲೂ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಮಾತ್ರವಲ್ಲದೆ, ಗೋಕರ್ಣ ವಿದೇಶಿ ಪ್ರವಾಸಿಗರ ಹಾಟ್ ಫೇವರೇಟ್ ಸ್ಪಾಟ್ ಕೂಡಾ ಹೌದು. ಹೀಗಾಗಿ ಪ್ರತಿವರ್ಷ ಸಾವಿರಾರು ಮಂದಿ ಗೋಕರ್ಣದ ಕಡಲ ತೀರಗಳಿಗೆ ಭೇಟಿ ನೀಡುತ್ತಾರೆ. ಆದ್ರೆ ಈ ಬಾರಿ ಕೊರೊನಾ ಪರಿಣಾಮ ಪ್ರವಾಸಕ್ಕೆಂದು ಬಂದಿದ್ದ ಸಾಕಷ್ಟು ಮಂದಿ ವಿದೇಶಿ ಪ್ರಜೆಗಳು ಗೋಕರ್ಣದಲ್ಲೇ ಲಾಕ್ ಆಗುವಂತಾಗಿದೆ.
ಕೊರೊನಾ ಲಾಕ್‌ಡೌನ್‌ನಿಂದಾಗಿ ಅಂತರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದ್ದು, ಇದುವರೆಗೂ ಪ್ರಾರಂಭವಾಗಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ಗೋಕರ್ಣದಲ್ಲಿದ್ದ ವಿದೇಶಿ ಪ್ರವಾಸಿಗರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಯಿತು. ಹೀಗಾಗಿ ಕೆಲವರು ರೆಸಾರ್ಟ್‌ಗಳನ್ನು ತೊರೆದು ಕಡಿಮೆ ವೆಚ್ಚದ ಲಾಡ್ಜ್‌ಗಳಲ್ಲಿ ಉಳಿದುಕೊಂಡಿದ್ದಾರೆ. ಇನ್ನೂ ಕೆಲವರು ಬಾಡಿಗೆ ಮನೆ ಸಹ ಮಾಡಿಕೊಂಡು ಪರಿಸ್ಥಿತಿಯನ್ನ ನಿಭಾಯಿಸುತ್ತಿದ್ದಾರೆ ಎನ್ನುತಾರೆ ಸ್ಥಳೀಯರಾದ ರಮೇಶ ಪಂಡಿತ.
ಆರಂಭದಲ್ಲಿ ವಿದೇಶಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದರಿಂದ ಹಲವರು ಕೊರೊನಾ ಭೀತಿಯಿಂದ ತಮ್ಮ ದೇಶಕ್ಕೆ ವಾಪಸ್ಸಾಗಿರಲಿಲ್ಲ. ಈ ವೇಳೆ ವಿದೇಶಿಗರಿಗೆ ವಾಪಸ್ಸಾಗಲು ವಿಮಾನ ವ್ಯವಸ್ಥೆಯನ್ನು ಸಹ ಸರ್ಕಾರ ಮಾಡಿಕೊಟ್ಟಿದ್ದು ಹಲವರು ತೆರಳಿದರಾದರೂ ಇನ್ನೂ ಕೆಲವರು ಇಲ್ಲಿಯೇ ಉಳಿದುಕೊಂಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಜಿಲ್ಲೆಯಲ್ಲಿರುವ ವಿದೇಶಿ ಪ್ರಜೆಗಳ ಕುರಿತು ಪ್ರತಿನಿತ್ಯ ಮಾಹಿತಿ ಕಲೆ ಹಾಕಲಾಗುತ್ತದೆ. ವಿಸಾ ಮುಕ್ತಾಯವಾದವರಿಗೆ ಅವಧಿ ವಿಸ್ತರಿಸಿಕೊಳ್ಳಲು ಅವಕಾಶವನ್ನು ಸಹ ನೀಡಲಾಗಿದೆ. ಹಾಗಿದ್ದೂ ಅಕ್ರಮವಾಗಿ ಉಳಿದುಕೊಂಡಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.