ಕಾರವಾರ: ಭಟ್ಕಳದಲ್ಲಿ ಇಂದು ಮತ್ತೆ 7 ಸೋಂಕಿತರು ಪತ್ತೆಯಾಗಿದ್ದು, ಹೆಚ್ಚುತ್ತಿರುವ ಸಂಖ್ಯೆಯಿಂದ ಆತಂಕಕ್ಕೊಳಗಾಗದೆ ತಮ್ಮಲ್ಲಿರುವ ಮಾಹಿತಿಯನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ. ಹರೀಶ್ಕುಮಾರ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಭಟ್ಕಳದಲ್ಲಿ ಇಂದು ಪತ್ತೆಯಾದ 7 ಕೊರೊನಾ ಪಾಸಿಟಿವ್ ಪ್ರಕರಣಗಳು ಸೋಂಕಿತೆ ಸಂಖ್ಯೆ 659ರ ಸಂಪರ್ಕಕ್ಕೆ ಬಂದ ಕುಟುಂಬಸ್ಥರು ಹಾಗೂ ಸ್ನೇಹಿತೆಯ ತಂದೆಯಾಗಿದ್ದಾರೆ. ಈಗಾಗಲೇ ಸೋಂಕಿತ ಪ್ರಾಥಮಿಕ ಹಾಗೂ ಎರಡನೇ ಹಂತದಲ್ಲಿ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಿದ್ದು, ಸಮುದಾಯಕ್ಕೆ ಹಬ್ಬುವ ಆತಂಕ ಇಲ್ಲ. ಇದರಿಂದ ಜನರು ಹೆಚ್ಚುತ್ತಿರುವ ಸಂಖ್ಯೆ ಬಗ್ಗೆ ಭಯಪಡದೆ ಸೊಂಕಿತರು ಅಥವಾ ಇತರ ಭಾಗಗಳಿಗೆ ತೆರಳಿದ ಬಗ್ಗೆ ಮಾಹಿತಿ ಇದ್ದಲ್ಲಿ ಹಂಚಿಕೊಳ್ಳಬೇಕು ಎಂದು ಹೇಳಿದರು.
ಇನ್ನು ಕಳೆದ 26ಕ್ಕೂ ಅಧಿಕ ದಿನಗಳಲ್ಲಿ ಭಟ್ಕಳದಲ್ಲಿ ಯಾವುದೇ ಕೊರೊನಾ ಪ್ರಕರಣಗಳು ಕಂಡುಬಂದಿರಲಿಲ್ಲ. ಆದ್ರೆ ಮಂಗಳೂರಿನ ಫಸ್ಟ್ ನ್ಯೂರೊ ಆಸ್ಪತ್ರೆಗೆ ಹೋಗಿ ಬಂದ ಕುಟುಂಬಸ್ಥರಲ್ಲಿ ಕೋವಿಡ್-19 ಪತ್ತೆಯಾಗಿದೆ. ಆದರೆ, ಈ ಬಗ್ಗೆ ಮೊದಲೆ ಮಾಹಿತಿ ಇದ್ದಿದ್ದರೆ ಸೋಂಕು ನಿಯಂತ್ರಣಕ್ಕೆ ಇನ್ನಷ್ಟು ಸಹಕಾರಿಯಾಗುತ್ತಿತ್ತು. ಹೀಗಾಗಿ ಸಾರ್ವಜನಿಕರಲ್ಲಿ ಈ ಬಗ್ಗೆ ಯಾವುದೇ ರೀತಿಯ ಮಾಹಿತಿ ಇದ್ದಲ್ಲಿ ಜಿಲ್ಲಾಡಳಿತಕ್ಕೆ ತಿಳಿಸಿ. ಇದರಿಂದ ಕೊರೊನಾ ನಿಯಂತ್ರಣಕ್ಕೆ ಇನ್ನಷ್ಟು ಸಹಕಾರಿಯಾಗಲಿದೆ. ಯಾರು ಕೂಡ ಸ್ವಯಂ ಚಿಕಿತ್ಸೆಗೆ ಒಳಗಾಗಬಾರದು. ಅಂತವರು ಕಂಡು ಬಂದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.