ಕಾರವಾರ: ದೇವಾಲಯದ ಜಾತ್ರೆ ಎಂದರೆ ಗ್ರಾಮದಲ್ಲಿ ಸಂಭ್ರಮ ಸಡಗರ. ಸಾಮಾನ್ಯವಾಗಿ ಜಾತ್ರೆಯ ಸಂದರ್ಭ ದೇವಾಲಯಗಳಲ್ಲಿ ವಿವಿಧ ಆಚರಣೆಗಳು ನಡೆಯುತ್ತದೆ. ಆದರೆ, ಇಲ್ಲೊಂದು ಕಡೆ ದೇವಾಲಯದಲ್ಲಿ ನಡೆಯುವ ಜಾತ್ರೆಯಲ್ಲಿ ಬಲೂನನ್ನು ಆಕಾಶಕ್ಕೆ ಹಾರಿ ಬಿಡಲಾಗುತ್ತದೆ.
ಒಂದೆಡೆ ಸಂಭ್ರಮದಿಂದ ನೆರೆದಿರುವ ಜನ. ಇನ್ನೊಂದೆಡೆ ಹರ ಹರ ಮಹಾದೇವ್ ಎಂದು ಹರ್ಷೋದ್ಗಾರ ಹಾಕುತ್ತಿರುವ ಭಕ್ತರು. ಮತ್ತೊಂದೆಡೆ ಗಾಳಿಯಲ್ಲಿ ಎತ್ತರಕ್ಕೆ ಹಾರುತ್ತಿರುವ ಬಲೂನು. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು, ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ. ಇಲ್ಲಿನ ಮಾಜಾಳಿ ಗ್ರಾಮದಲ್ಲಿ ಪ್ರತಿವರ್ಷ ರಾಮನಾಥ ದೇವರ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಜಾತ್ರೆಯ ಪ್ರಯುಕ್ತ ಬಿಸಿ ಗಾಳಿ ತುಂಬಿದ ಬಲೂನ್ನನ್ನು ಆಕಾಶಕ್ಕೆ ಹಾರಿ ಬಿಡುವ ಸಂಪ್ರದಾಯವನ್ನು ಹಲವು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಮಾಜಾಳಿಯ ರಾಮನಾಥ ದೇವರ ಜಾತ್ರೆ : ಪ್ರತಿ ವರ್ಷ ಕಾರ್ತಿಕಮಾಸದ ದ್ವಿತೀಯಾದಂದು ಮಾಜಾಳಿಯ ರಾಮನಾಥ ದೇವರ ಜಾತ್ರೆ ನಡೆಯುತ್ತದೆ. ಜಾತ್ರೆಯ ಸಂದರ್ಭ ರಾಮನಾಥ ದೇವಸ್ಥಾನದಲ್ಲಿನ ರಾಮನಾಥ ದೇವರ ಮೂರ್ತಿಯನ್ನು ರಾತ್ರಿ ಪಲ್ಲಕ್ಕಿಯಲ್ಲಿ ಸಾತೇರಿದೇವಿ ದೇವಸ್ಥಾನಕ್ಕೆ ತರಲಾಗುತ್ತದೆ. ಅಲ್ಲಿ ಬೆಳಿಗ್ಗೆ ದೇವರ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಕುಳಾವಿ ಜನರು ಕಟ್ಟಿರುವ ತೋರಣಗಳ ಬಳಿ ಬರುವ ದೇವರ ಪಲ್ಲಕ್ಕಿಗೆ ಜನರು ಆರತಿ ಬೆಳಗಿ ಹೂವು ಹಣ್ಣು ನೀಡಿ ಪೂಜೆ ಸಲ್ಲಿಸುತ್ತಾರೆ.
ಬಲೂನ್ ಜಾತ್ರೆ ಎಂದು ಪ್ರಸಿದ್ಧಿ : ಇನ್ನು ಈ ಜಾತ್ರೆಯ ಸಂದರ್ಭ ಬಿಸಿ ಗಾಳಿ ತುಂಬಿದ ಬಲೂನನ್ನು ಆಕಾಶಕ್ಕೆ ಹಾರಿಬಿಡಲಾಗುತ್ತದೆ. ವಾಫರ್ ಎಂದು ಕರೆಯಲ್ಪಡುವ ಈ ಬಲೂನನ್ನು ಗ್ರಾಮದ ಕೆಲ ಯುವಕರು ಒಟ್ಟಾಗಿ ಪೇಪರ್‌ನಿಂದ ತಯಾರಿಸುತ್ತಾರೆ. ಹೀಗೆ ತಯಾರಿಸುವ ಈ ವಾಫರನ್ನು ದೇವರ ಪಲ್ಲಕ್ಕಿ ಬಂದ ಸಂದರ್ಭದಲ್ಲಿ ಹಾರಿ ಬಿಡಲಾಗುತ್ತದೆ. ಇನ್ನು ಈ ಬಲೂನು ಸುಮಾರು 20 ಅಡಿ ಎತ್ತರ, 8 ಅಡಿ ಅಗಲವಿರುತ್ತದೆ.
ಬಲೂನ್ ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿರೋ ಈ ಜಾತ್ರೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಎರಡು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಊರವರು ಭಕ್ತಿ ಹಾಗೂ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಾರೆ.
ವಿವಿಧೆಡೆಯಿಂದ ಜಾತ್ರೆ ಆಗಮಿಸುವ ಜನ : ಜಾತ್ರೆಯ ಕೊನೆಯ ದಿನ ಬೆಳಗ್ಗೆ ಹಾಗೂ ಸಂಜೆ ಈ ರೀತಿ ಎರಡು ಬಲೂನುಗಳನ್ನ ಆಕಾಶಕ್ಕೆ ತೇಲಿ ಬಿಡುತ್ತಾರೆ. ಬೆಳಗ್ಗೆ ಗ್ರಾಮದ ಸಾತೇರಿ ದೇವಸ್ಥಾನದ ಬಳಿ ಒಂದು ಬಲೂನ್ ಹಾರಿಸಿದರೆ ಸಂಜೆ ವೇಳೆ ರಾಮನಾಥ ದೇವಾಲಯದ ಬಳಿ ಮತ್ತೊಂದು ಬಲೂನ್ನನ್ನು ಬಿಡಲಾಗುತ್ತದೆ. ಇನ್ನು ಈ ಬೃಹತ್ ಗಾತ್ರದ ಬಲೂನನ್ನು ಆಕಾಶಕ್ಕೆ ಬಿಡುವುದನ್ನು ನೋಡಲು ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯ ಸಾಕಷ್ಟು ಮಂದಿ ಆಗಮಿಸುತ್ತಾರೆ.
ಬಲೂನನ್ನು ಬಿಡುವುದರಿಂದ ಸಂಕಷ್ಟಗಳ ನಿವಾರಣೆ : ಹೀಗೆ ಬಲೂನನ್ನು ಗಾಳಿಯಲ್ಲಿ ಹಾರಿ ಬಿಡುವುದರಿಂದ ಗ್ರಾಮದಲ್ಲಿನ ಕಷ್ಟ, ತೊಂದರೆ,ರೋಗ ಇತ್ಯಾದಿ ಸಂಕಷ್ಟಗಳು ಹೊಗೆಯ ರೂಪದಲ್ಲಿ ಗ್ರಾಮದಿಂದ ಹಾರಿ ಹೋಗಲಿ ಎನ್ನುವ ಉದ್ದೇಶದಿಂದ ಈ ರೀತಿ ವಾಫರ್ ಹಾರಿ ಬಿಡಲಾಗುತ್ತದೆ. ಆಕಾಶಕ್ಕೆ ಹಾರಿಬಿಡುವ ಈ ವಾಫರ್ ಸಾಕಷ್ಟು ಎತ್ತರದಲ್ಲಿ ಗಂಟೆಗಟ್ಟಲೇ ಹಾರಿ ನಂತರ ಸಮುದ್ರದಲ್ಲಿ ಬೀಳುತ್ತದೆ. ಹೀಗೆ ಬಿದ್ದರೆ ಗ್ರಾಮದಲ್ಲಿನ ತೊಂದರೆಗಳು ನಿವಾರಣೆಯಾಗುತ್ತದೆ ಎಂಬುದು ಇಲ್ಲಿನ ಗ್ರಾಮಸ್ಥರ ನಂಬಿಕೆಯಾಗಿದೆ.
ಇದನ್ನೂ ಓದಿ : ಇಲ್ಲಿ ಲಕ್ಕಮ್ಮ ದೇವಿಯ ಬೆನ್ನಿಗೆ ಪೂಜೆ, ಚಪ್ಪಲಿ ಹರಕೆ ನೀಡಿದರೆ ಇಷ್ಟಾರ್ಥ ಸಿದ್ಧಿಸುತ್ತಂತೆ!