ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಜಿಲ್ಲೆಯ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ತಲೆದೋರಿದೆ. ಅದರಲ್ಲೂ ಅಘನಾಶಿನಿ ನದಿ ನೆರೆಗೆ ಹಲವು ಗ್ರಾಮಗಳು ಜಲಾವೃತವಾಗಿವೆ. ಜನಜೀವನ ಅಸ್ತವ್ಯಸ್ತವಾಗಿದೆ.
ಅಘನಾಶಿನಿ, ಗಂಗಾವಳಿ, ಶರಾವತಿ, ವರದಾ ಹಾಗು ಕಾಳಿ ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಘಟ್ಟದ ಮೇಲ್ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದಾಗಿ ಗಂಗಾವಳಿ ಹಾಗೂ ಅಘನಾಶಿನಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ತೀರದ ಪ್ರದೇಶಗಳು ಬಹುತೇಕ ಮಳೆ ನೀರಿನಿಂದ ಆವೃತವಾಗಿದ್ದು, ಜನ-ಜಾನುವಾರುಗಳ ಸ್ಥಳಾಂತರ ಕಾರ್ಯ ನಡೆಯುತ್ತಿದೆ.
ಶಿರಸಿಯ ಶಂಕರಹೊಂಡದಿಂದ ಹುಟ್ಟಿ ಸುಮಾರು 117 ಕಿ.ಮೀ. ಹರಿದು ಕುಮಟಾದಲ್ಲಿ ಅರಬ್ಬಿ ಸಮುದ್ರ ಸೇರುವ ಅಘನಾಶಿನಿ ಈ ವರ್ಷ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೇಂದ್ರ ಜಲ ಆಯೋಗ ಸೋಮವಾರ ಬೆಳಿಗ್ಗೆ ನೀಡಿರುವ ಮಾಹಿತಿಯ ಪ್ರಕಾರ, 17 ಮೀ. ಗರಿಷ್ಟ ಮಟ್ಟ ಎಂದು ನಿಗದಿಪಡಿಸಿದ್ದು, ನೀರಿನ ಮಟ್ಟ 17.60 ಮೀ.ಗೆ ಏರಿಕೆಯಾಗಿದೆ. ಸದ್ಯ ಜಿಲ್ಲಾಡಳಿತ ಅಘನಾಶಿನಿಯಿಂದ ಪ್ರವಾಹಬಾಧಿತ ಪ್ರದೇಶಗಳ ಜನರಿಗಾಗಿ ಕಾಳಜಿ ಕೇಂದ್ರಗಳನ್ನು ತೆರೆಯುತ್ತಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಲಾಗಿದೆ.
ಇಂದೂ ಶಾಲಾ-ಕಾಲೇಜುಗಳಿಗೆ ರಜೆ : ಭಾನುವಾರ ರಾತ್ರಿ ಶಿರಸಿ-ಕುಮಟಾ ರಸ್ತೆಯ ರಾಗಿಹೊಸಳ್ಳಿ ಬಳಿ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ತೊಡಕಾಯಿತು. ಈ ಮಾರ್ಗದಲ್ಲಿ ಭಾರಿ ವಾಹನಗಳ ಓಡಾಟ ಕಷ್ಟವಿದ್ದು, ಲಘು ವಾಹನಗಳಿಗೆ ಸಂಚರಿಸಲು ಪೊಲೀಸರು ಅವಕಾಶ ಮಾಡಿಕೊಡುತ್ತಿದ್ದಾರೆ. ಶಿರಸಿ ಮತ್ತು ಕುಮಟಾದಿಂದ ಸಾಗುವವರಿಗೆ ಬದಲಿ ಮಾರ್ಗಗಳನ್ನು ಬಳಸುವಂತೆಯೂ ಸೂಚಿಸಲಾಗಿದೆ. ಹವಾಮಾನ ಇಲಾಖೆ ಇನ್ನೂ 5 ದಿನಗಳವರೆಗೆ ಭಾರಿ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಿದ್ದು, ಶಾಲಾ- ಕಾಲೇಜುಗಳಿಗೆ ಮಂಗಳವಾರವೂ ರಜೆ ಘೋಷಣೆ ಮಾಡಲಾಗಿದೆ.
ಜಿಲ್ಲಾಡಳಿತ ಅಘನಾಶಿನಿಯಿಂದ ಪ್ರವಾಹಪೀಡಿತ ಪ್ರದೇಶಗಳ ಜನರಿಗಾಗಿ 4 ಕಾಳಜಿ ಕೇಂದ್ರಗಳನ್ನು ತೆರೆದಿದೆ. ಹೊನ್ನಾವರದಲ್ಲಿಯೂ ಶರಾವತಿ ನದಿ ಉಕ್ಕಿ ಹರಿಯುತ್ತಿದ್ದು, ಒಟ್ಟು 5 ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಜೋಯಿಡಾದಲ್ಲಿ ಶಾಲೆ ಕುಸಿದು ಬಿದ್ದಿದೆ. ಶಾಲೆಗೆ ರಜೆ ನೀಡಿದ್ದರಿಂದ ಅನಾಹುತ ತಪ್ಪಿದೆ.
ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು : ಕಾಲೇಜಿಗೆ ರಜೆ ಇದ್ದ ಕಾರಣ ಹೊನ್ನಾವರ ಪಟ್ಟಣದ ರಾಮತೀರ್ಥಕ್ಕೆ ಈಜಲು ತೆರಳಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿಯನ್ನು ಪಟ್ಟಣದ ರಾಯಲಕೇರಿ ನಿವಾಸಿ ಮಣಿಕಂಠ ಮಂಜುನಾಥ ನಾಯ್ಕ (17) ಎಂದು ಗುರುತಿಸಲಾಗಿದೆ. ಈತ ಪಟ್ಟಣದ ಸರ್ಕಾರಿ ಮೋಹನ ಕೆ.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯುಸಿ ವಿದ್ಯಾರ್ಥಿಯಾಗಿದ್ದ.
ಪೊಲೀಸರು ಸಾರ್ವಜನಿಕರ ಸಹಕಾರದಿಂದ ಶವವನ್ನು ನೀರಿನಿಂದ ಹೊರ ತೆಗೆದಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಕೋಲಾಕ್ಕೆ ಪ್ರವಾಹ ಭೀತಿ : ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ಪ್ರದೇಶಗಳು ಜಲಾವೃತಗೊಂಡಿವೆ. ಹೊನ್ನೆಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಹೋಯ್ಗೆ ಗ್ರಾಮದಲ್ಲಿ ನದಿ ನೀರು ಮನೆಗಳಿಗೆ ನುಗ್ಗಿದ್ದು, ಜನರು ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತ್ ವತಿಯಿಂದ ಇಲ್ಲಿನ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ದತೆ ಕೂಡ ಮಾಡಿಕೊಳ್ಳಲಾಗಿದೆ.
"ದಂಡೆಭಾಗ ಪ್ರದೇಶದಲ್ಲಿ ಖಾರ್ಲ್ಯಾಂಡ್ ಒಡ್ಡು ಒಡೆದಿರುವ ಕಾರಣ ಗಂಗಾವಳಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ನೀರು ಗ್ರಾಮಗಳಿಗೆ ನುಗ್ಗಿ ಜನರು ಪರದಾಡುವಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು" ಎಂದು ಗ್ರಾಮದ ನಿವಾಸಿ ಗಣೇಶ ಹರಿಕಂತ್ರ ಆಗ್ರಹಿಸಿದರು.
"ಕಳೆದ ನಾಲ್ಕು ವರ್ಷದಿಂದ ಪ್ರವಾಹ ಉಂಟಾಗುತ್ತಿದೆ. ಈ ನೆರೆ ಬೇಗ ಇಳಿಯುವುದಿಲ್ಲ. ಖಾರ್ಲ್ಯಾಂಡ್ ಒಡ್ಡು ಸರಿಪಡಿಸಿದ್ದಲ್ಲಿ ಮಾತ್ರ ಪ್ರವಾಹ ತಡೆಯಬಹುದು. ಆದರೆ ಇಷ್ಟೊಂದು ಪ್ರವಾಹವಾದರೂ ಶಾಸಕರಾಗಲಿ ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಆಗಮಿಸಿಲ್ಲ. ಮನೆಯಲ್ಲಿರುವ ವಸ್ತುಗಳು ಹಾಳಾಗುತ್ತಿದೆ. ಕೊಡುವ ಪರಿಹಾರಕ್ಕಿಂತಲೂ ಹೆಚ್ಚು ನಮ್ಮ ಕೈಯಿಂದಲೇ ಹೋಗುತ್ತಿದೆ. ನಮಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು. ನೆರೆ ತಪ್ಪಿಸಬೇಕು" ಎಂದು ದೇವರಾಜ ಹರಿಕಂತ್ರ ಆಗ್ರಹಿಸಿದರು.
ಅಘನಾಶಿನಿಯಿಂದ ಉಂಟಾದ ಪ್ರವಾಹದಿಂದಾಗಿ ಜಲಾವೃತಗೊಂಡ ಪ್ರದೇಶಗಳನ್ನು ಯುವ ಛಾಯಾಗ್ರಾಹಕ ಗೋಪಿ ಜಾಲಿ ತಮ್ಮ ಡ್ರೋಣ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ : ಭಾರಿ ಮಳೆ - ನಾಳೆ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ