ಕಾರವಾರ (ಉತ್ತರಕನ್ನಡ): ಹೊರ ರಾಜ್ಯದಿಂದ ಬಂದ 7 ಜನ ಹಾಗೂ ಭಟ್ಕಳದ ಎರಡು ವರ್ಷದ ಮಗು ಸೇರಿ ಎಂಟು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ ಎಲ್ಲರನ್ನು ಕ್ವಾರಂಟೈನ್ ಮಾಡಿರುವ ಕಾರಣ ಯಾರು ಕೂಡ ಆತಂಕ ಪಡುವ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ ಕುಮಾರ್ ಮಾಹಿತಿ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯದಿಂದ ಹೊನ್ನಾವರಕ್ಕೆ 4, ಮುಂಡಗೋಡಕ್ಕೆ ಇಬ್ಬರು, ಮುರುಡೇಶ್ವರಕ್ಕೆ ಓರ್ವ ಸೇರಿ 7 ಜನ ಬಂದಿದ್ದರು. ಇವರನ್ನು ತಪಾಸಣೆ ಮಾಡಿ ಕ್ವಾರಂಟೈನ್ ಮಾಡಲಾಗಿತ್ತು. ಭಟ್ಕಳದ ಎರಡು ವರ್ಷದ ಮಗುವಿನ ತಂದೆ-ತಾಯಿಗೆ ಕೊರೊನಾ ಸೋಂಕು ತಗುಲಿದ್ದು, ಇದೀಗ ಮಗುವಿಗೂ ಬಂದಿದೆ. ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಇದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾರಾದರು ಹೊರಗಡೆಯಿಂದ ಬಂದವರು ಇದ್ದಲ್ಲಿ ತಕ್ಷಣ ಮಾಹಿತಿ ನೀಡಬೇಕು ಎಂದು ಹೇಳಿದರು. ಸೋಂಕಿತರಾದ ಎಲ್ಲರಿಗೂ ವ್ಯವಸ್ಥೆ ಇರುವ 100 ಸಂಖ್ಯೆವರೆಗೂ ಕಾರವಾರದ ಮೆಡಿಕಲ್ ಕಾಲೇಜಿನಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಈಗಾಗಲೇ ನಮ್ಮಲ್ಲಿ ದಾಖಲಾದ ಸೋಂಕಿತರ ಪೈಕಿ ಏಳು ಜನರ ವರದಿ ನೆಗೆಟಿವ್ ಬಂದಿದ್ದು, ಮತ್ತೊಮ್ಮೆ ಖಚಿತಪಡಿಸಿಕೊಳ್ಳಲು ಮಂಗಳೂರು ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಲಾಗಿದೆ. ವರದಿ ಬಂದ ಬಳಿಕ ನೆಗೆಟಿವ್ ಇದ್ದರೆ ಬಿಡಲಾಗುವುದು ಎಂದು ಹೇಳಿದರು.
ಎಲ್ಲ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಮಾಡಲ್ಲ. ಆದರೆ ಎಲ್ಲಿಯಾದರೂ ಸಮುದಾಯದವರೊಂದಿಗೆ ಬೆರೆತ ಬಗ್ಗೆ ಮಾಹಿತಿ ಇದ್ದಲ್ಲಿ ಮಾಡುತ್ತೇವೆ. ಮುಂಡಗೋಡಿನ ಇಬ್ಬರು ಒಂದು ಗಂಟೆ ಓಡಾಡಿದ ಬಗ್ಗೆ ಮಾಹಿತಿ ಹಿನ್ನೆಲೆ ಆ ಪ್ರದೇಶದಲ್ಲಿ ಜನ ಓಡಾಟ ಹೆಚ್ಚಿರುವ ಕಾರಣಕ್ಕೆ ಸೀಲ್ಡೌನ್ ಮಾಡಲಾಗುತ್ತದೆ. ಉಳಿದಂತೆ ಸೋಂಕಿತರು ಪತ್ತೆಯಾದ ಕ್ವಾರಂಟೈನ್ ಕೇಂದ್ರವನ್ನು ಮಾತ್ರ ಕಂಟೇನ್ಮೆಂಟ್ ಝೋನ್ ಎಂದು ಪರಿಗಣಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.