ಕಾರವಾರ: ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಮಾಲ್ವಾನ್ ಸಮುದ್ರ ತೀರದ ಬಳಿ ಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳ ಚಿತ್ರವನ್ನು ಇಂದು ಭಾರತೀಯ ನೌಕಾಸೇನೆ ತನ್ನ ಟ್ವಿಟ್ಟರ್‌ನಲ್ಲಿ ಬಿಡುಗಡೆ ಮಾಡಿದೆ.
ಇದರೊಂದಿಗೆ ಬೋಟ್ ಅವಶೇಷ ಪತ್ತೆಯಾಗಿರುವ ಬಗ್ಗೆ ಮೀನುಗಾರರು ಹಾಗೂ ಮೀನುಗಾರರ ಕುಟುಂಬದವರಲ್ಲಿದ್ದ ಅನುಮಾನ ದೂರವಾಗಲಿದೆ. ಆದರೆ ಬೋಟಿನಲ್ಲಿದ್ದ ಏಳು ಜನ ಮೀನುಗಾರರು ಮತ್ತು ಅದರಲ್ಲಿದ್ದ ಬಲೆ ಸೇರಿದಂತೆ ಇನ್ನಿತರ ಪರಿಕರಗಳು ಏನಾದವು ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿಯಿಲ್ಲ.
ಉಡುಪಿಯ ಮಲ್ಪೆಯಿಂದ ಡಿ.15 ರಂದು ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟಿನಲ್ಲಿ ಉತ್ತರಕನ್ನಡ ಜಿಲ್ಲೆಯ 5, ಉಡುಪಿಯ ಇಬ್ಬರು ಸೇರಿ 7 ಮಂದಿ ಇದ್ದರು. ಇತ್ತೀಚೆಗೆ ಮೀನುಗಾರ ಪ್ರಮುಖರು ಹಾಗೂ ನೌಕಾನೆಲೆ ಸಿಬ್ಬಂದಿ ತೀವ್ರ ಹುಡುಕಾಟ ನಡೆಸಿದ್ದರು. ಕೊನೆಗೂ ನಾಲ್ಕುವರೆ ತಿಂಗಳ ಹುಡುಕಾಟದ ಬಳಿಕ ಬೋಟ್ ಮುಳುಗಡೆಯಾಗಿರುವುದು ಪತ್ತೆಯಾಗಿತ್ತು.
ಮಾಲ್ವಾನ್ ಸಮುದ್ರತೀರದಲ್ಲಿ ಸುಮಾರು 60 ಮೀಟರ್ ಆಳದಲ್ಲಿ ಬೋಟ್ ಇರುವ ಬಗ್ಗೆ ನೌಕಾನೆಲೆ ಸಿಬ್ಬಂದಿ ಸೋನಾರ್ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿದ್ದರು. ಬಳಿಕ ಸ್ಕೂಬಾ ಡೈವರ್ಸ್ ಮೂಲಕ ಸಮುದ್ರದಾಳಕ್ಕೆ ಕಳುಹಿಸಿ ಪೋಟೊ ತೆಗೆಸಲಾಗಿತ್ತು.