ಕಾರವಾರ: ಕಟ್ಟುನಿಟ್ಟಿನ ಸೂಚನೆ ನಡುವೆಯೂ ಅನಗತ್ಯವಾಗಿ ಕೆಲವರು ಬೀದಿಗಳಲ್ಲಿ ಸುತ್ತಾಡುತ್ತಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೊದಲ ಬಾರಿ ನಿಯಮ ಮೀರಿದವರಿಗೆ ಅಳಿಸಲಾಗದ ಮುದ್ರೆ ಹಾಕಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮುಂದುವರೆದು ಎರಡನೇ ಬಾರಿ ಆ ವ್ಯಕ್ತಿಯ ಮನೆಯ ಸುತ್ತ ಮೈಕ್ನಲ್ಲಿ ಘೋಷಣೆ ಕೂಗಲಾಗುವುದು. ಅಷ್ಟಕ್ಕೂ ಮೀರಿ ಮೂರನೇ ಬಾರಿ ನಿಯಮ ಉಲ್ಲಂಘಿಸಿದರೆ ಜಿಲ್ಲಾಡಳಿತದ ವೆಬ್ಸೈಟ್ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಅಂತವರ ಫೋಟೋ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆದೇಶ ಮೀರಿ ಸಂಚರಿಸುವ ವಾಹನಗಳ ನೋಂದಣಿ ಹಾಗೂ ಚಾಲಕನ ಪರವಾನಗಿ ರದ್ದುಗೊಳಿಸಲಾಗುವುದು. ಅವಶ್ಯಕ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.