ಕಾರವಾರ: ಕಳೆದ ಬಾರಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದ ಉತ್ತರ ಕನ್ನಡ ಜಿಲ್ಲೆ ಈ ಬಾರಿ ಕೋವಿಡ್ ಪಾಸಿಟಿವಿಟಿ ರೇಟ್ನಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಆದರೆ ಇಂತಹ ಕೆಟ್ಟ ಸ್ಥಿತಿ ಬರಲು ಜನರ ಜೊತೆ ಜಿಲ್ಲಾಡಳಿತದ ನಿರ್ಲಕ್ಷ್ಯವೂ ಕಾರಣವಾದಂತಿದೆ.
ಹೌದು, ರಾಜ್ಯದ 26 ಜಿಲ್ಲೆಗಳ ಕೋವಿಡ್-19 ಸೋಂಕಿನ ಪಾಸಿಟಿವಿಟಿ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಈ ಪೈಕಿ ಉತ್ತರ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ರಾಷ್ಟ್ರೀಯ ಸಕಾರಾತ್ಮಕ ದರವು ಶೇಕಡಾ 21 ಆಗಿದ್ದು, ಉತ್ತರ ಕನ್ನಡದಲ್ಲಿ ಶೇ. 45.7ರಷ್ಟು ಕೊರೊನಾ ಪಾಸಿಟಿವಿಟಿ ರೇಟ್ ಇದೆ. ಬಳ್ಳಾರಿ (ಶೇ. 44.3), ಹಾಸನ (ಶೇ. 42.1) ಮತ್ತು ಮೈಸೂರು (ಶೇ. 41.3) ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ. ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿರುವ ಬೆಂಗಳೂರು ನಗರದಲ್ಲಿ ಶೇಕಡಾ 34.7ರಷ್ಟು ಪಾಸಿಟಿವಿಟಿ ದರವಿದೆ. ಈ ರೀತಿ ರಾಜ್ಯದ 28 ಸೇರಿದಂತೆ ದೇಶದ 310 ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಈ ದರವು ಪ್ರಸ್ತುತ ಸೋಂಕಿತರ ಸಂಖ್ಯೆ ಏರಿಕೆಗೂ ಕಾರಣವಾಗಿದೆ ಎನ್ನಲಾಗಿದೆ.
ಜಿಲ್ಲಾ ಕೇಂದ್ರ ಕಾರವಾರದಲ್ಲಿಯೇ ಹೆಚ್ಚು: ಉತ್ತರ ಕನ್ನಡದಲ್ಲಿ ಮೇ 5ರಿಂದ 11ರ ನಡುವಿನ ಅವಧಿಯಲ್ಲಿ ಸಂಗ್ರಹಿಸಿದ 14,611 ಗಂಟಲು ದ್ರವಗಳಲ್ಲಿ 6,372 ಮಂದಿಗೆ ಸೋಂಕು ದೃಢಪಟ್ಟಿದೆ. ಈ ರೀತಿ ಪರೀಕ್ಷೆ ಮಾಡಿಸಿಕೊಳ್ಳುವವರಲ್ಲಿ ಕೋವಿಡ್ ಸೋಂಕು ದೃಢಪಡುವ ದರವನ್ನು ಪಾಸಿಟಿವಿಟಿ ರೇಟ್ ಎಂದು ಕರೆಯಲಾಗುತ್ತದೆ. ಇನ್ನು ಜಿಲ್ಲೆಯಲ್ಲಿ ತಾಲೂಕುವಾರು ಪೈಕಿ ಕಾರವಾರದಲ್ಲಿ ಅತ್ಯಧಿಕ, ಅಂದರೆ ಸಂಗ್ರಹಿಸಿದ 1,453 ಗಂಟಲು ದ್ರವಗಳಲ್ಲಿ 861 ಮಂದಿ ಸೋಂಕಿತರು ಪತ್ತೆಯಾಗಿದ್ದು, ಇಲ್ಲಿ ಪಾಸಿಟಿವಿಟಿ ದರ ಶೇ. 59.3ರಷ್ಟಿದೆ. ಎರಡನೇ ಸ್ಥಾನದಲ್ಲಿ ಅಂಕೋಲಾ (996 ಗಂಟಲು ದ್ರವಗಳಲ್ಲಿ 518 ಮಂದಿಗೆ ಪಾಸಿಟಿವ್, ಪಾಸಿಟಿವಿಟಿ ಶೇ.52 ಇದ್ದು, ನಂತರದಲ್ಲಿ ಜೋಯಿಡಾ, ಕುಮಟಾ ಹೀಗೆ ಇತರೆ ತಾಲೂಕುಗಳಿವೆ.
ಕೋವಿಡ್ನಿಂದ ದಿನಕ್ಕೆ ಸರಾಸರಿ 9 ಸಾವು: ಇನ್ನು ಜಿಲ್ಲೆಯಲ್ಲಿ ಮೇ 1ರಿಂದ 11ರ ಅಂತರದಲ್ಲಿ ಒಟ್ಟು 8,938 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ. ಇದರ ಅರ್ಧದಷ್ಟು ಅಂದರೆ 4,517 ಸೋಂಕಿತರು ಗುಣಮುಖರಾಗಿದ್ದಾರೆ. ಈ ಅವಧಿಯಲ್ಲಿ 102 ಸೋಂಕಿತರು ಮೃತಪಟ್ಟಿದ್ದಾರೆ. ಪ್ರತಿದಿನ ಸರಾಸರಿ 9 ಸೋಂಕಿತರು ಮೃತರಾಗುತ್ತಿದ್ದಾರೆ. ಇನ್ನು ತಾಲೂಕಾವಾರು ನೋಡುವುದಾದರೆ ಶಿರಸಿ, ಹಳಿಯಾಳ (ದಾಂಡೇಲಿ ಸೇರಿ), ಕಾರವಾರ, ಸಿದ್ದಾಪುರದಲ್ಲಿ ಹೆಚ್ಚಿನ ಸೋಂಕಿತರು ಪ್ರತಿದಿನ ಪತ್ತೆಯಾಗುತ್ತಿದ್ದಾರೆ.
ಕೊರೊನಾಗೆ ಹೆದರಿ ತಪಾಸಣೆಗೆ ಹಿಂದೇಟು: ಇನ್ನು ಜಿಲ್ಲೆಯಲ್ಲಿ ಸೋಂಕಿನ ಲಕ್ಷಣವಿದ್ದರೂ ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿರುವುದು ಕೂಡ ಸೋಂಕಿತರ ಸಂಖ್ಯೆ ಹೆಚ್ಚಳವಾಗಲು ಕಾರಣವಾಗುತ್ತಿದೆ ಎನ್ನಲಾಗಿದೆ. ಆಸ್ಪತ್ರೆಗೆ ತೆರಳಲು ಮಾರ್ಗಮಧ್ಯೆ ಪೊಲೀಸರು ತಡೆಯುತ್ತಾರೆ. ಅಕ್ಕಪಕ್ಕದ ಮನೆಯವರು ಬೇರೆಯದೇ ರೀತಿಯಲ್ಲಿ ನೋಡುತ್ತಾರೆ ಎಂಬ ಭಾವನೆ ಹಾಗೂ ಮನೆಯಲ್ಲೇ ಇದ್ದರೆ ಗುಣಮುಖರಾಗಬಹುದು ಎಂಬ ಹುಂಬುತನದಿಂದಾಗಿ ಅನೇಕರು ತಪಾಸಣೆಗೆ ತೆರಳುತ್ತಿಲ್ಲ. ಇನ್ನು ಲಕ್ಷಣವಿದ್ದು, ಹೀಗೆ ತೆರಳಿದರೂ ಕೂಡ ವೈದ್ಯರ ಶಿಫಾರಸು ಕಡ್ಡಾಯವೆಂದು ಸೂಚಿಸಿರುವುದರಿಂದಲೂ ತಪಾಸಣೆಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗಿದೆ. ಇದರಿಂದಾಗಿ ಅನೇಕರು ತಪಾಸಣೆಗೆ ಬಂದೂ ವಾಪಸಾಗುತ್ತಿದ್ದಾರೆನ್ನಲಾಗಿದೆ.
ಮುಂಜಾಗ್ರತೆ ವಹಿಸುವಲ್ಲಿ ಎಡವಿತಾ ಜಿಲ್ಲಾಡಳಿತ!?: ಸೋಂಕು ತೀವ್ರಗೊಳ್ಳಲಿದೆ ಎಂದು ತಿಳಿದಿದ್ದರೂ ಸರ್ಕಾರ ಪ್ರಕಟಿಸಿದ ಮಾರ್ಗಸೂಚಿಯಂತೆ ಮಾತ್ರ ಜಿಲ್ಲಾಡಳಿತ ಅನುಸರಿಸಿ ಕ್ರಮಗಳನ್ನು ಕೈಗೊಂಡಿತೇ ವಿನಾ ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿಲ್ಲ. ಇದು ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಲು ನೇರ ಕಾರಣವಾಗಿದೆ. ಜನ ಕೂಡ ಜವಾಬ್ದಾರಿ ಮೆರೆಯಬೇಕು ನಿಜ. ಆದರೆ ಜಿಲ್ಲಾಡಳಿತ ಈಗ ಕೈಗೊಂಡಂತೆ ಒಂದಷ್ಟು ಕ್ರಮಗಳನ್ನು ಮೊದಲೇ ಕೈಗೊಂಡಿದ್ದರೆ ಸೋಂಕಿತರ ಸಂಖ್ಯೆ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗುತ್ತಿರಲಿಲ್ಲವೇನೋ. ಸೋಂಕಿತರ ಸಂಖ್ಯೆ ಹೆಚ್ಚಳವಾದ ಬಳಿಕ ಹೊರ ಜಿಲ್ಲೆ, ರಾಜ್ಯಗಳಿಂದ ಬಂದವರ ಕೈಗೆ ಸೀಲು ಹಾಕಲು ಪ್ರಾರಂಭಿಸಿರುವುದು, ಹೋಮ್ ಐಸೋಲೇಷನ್‌ನಲ್ಲಿರುವವರ ಮೇಲೆ ನಿಗಾದಂತಹ ಕ್ರಮಗಳನ್ನು ಈ ಮೊದಲೇ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿತ್ತು ಎಂಬುದು ಹಲವರ ಒತ್ತಾಯವಿತ್ತು. ಆದರೆ ಈ ಬಗ್ಗೆ ಸರ್ಕಾರದ ಆದೇಶವಿಲ್ಲದ ಕಾರಣ ನಿರ್ಲಕ್ಷಿಸಲಾಗಿತ್ತು. ಲಕ್ಷಣ ರಹಿತರ ಹಾಗೂ ವೈದ್ಯರ ಶಿಫಾರಸು ಪತ್ರವಿಲ್ಲದ ಲಕ್ಷಣ ಹೊಂದಿದವರಿಂದ ಗಂಟಲು ದ್ರವ ಸಂಗ್ರಹಿಸುವುದನ್ನು ನಿಲ್ಲಿಸಿರುವುದು ಸೋಂಕಿತರ ಸಂಖ್ಯೆ ಹೆಚ್ಚಳವಾಯಿತು ಎನ್ನಲಾಗಿದೆ.
ಈಗಲಾದರು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುತ್ತಾ?: ಇನ್ನು ಕಳೆದ ಬಾರಿ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತೆ ವಹಿಸಿತ್ತು. ಮಾತ್ರವಲ್ಲದೆ ಕಠಿಣ ನಿಯಮದ ಜೊತೆಗೆ ಸರ್ಕಾರದ ಆದೇಶದ ಹೊರತಾಗಿಯು ಸೋಂಕು ನಿಯಂತ್ರಣಕ್ಕೆ ಕೆಲ ಮುಂಜಾಗ್ರತಾ ಕ್ರಮ ಕೈಗೊಂಡಿತ್ತು. ಗ್ರಾಮೀಣ ಭಾಗದಲ್ಲಿ ಮನೆ ಮನೆ ಸರ್ವೆ ಮಾಡಿಸಿ ಜ್ವರ, ಕೆಮ್ಮು ಇದ್ದವರನ್ನು ಪತ್ತೆ ಮಾಡಿಸಿ ಕೊರೊನಾ ಪರೀಕ್ಷೆಗೆ ಒಳಪಡಿಸಿತ್ತು. ಅಲ್ಲದೆ ಕ್ವಾರಂಟೈನ್ಗೂ ವ್ಯವಸ್ಥೆ ಕೂಡ ಕಲ್ಪಿಸಿತ್ತು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಮಿಟಿ ಮಾಡಿ ಸೋಂಕಿತರು ಅನವಶ್ಯಕವಾಗಿ ಅಡ್ಡಾಡದಂತೆ ನಿಗಾ ಇಡಲು ಸೂಚಿಸಿತ್ತು. ಇದರಿಂದ ಜಿಲ್ಲೆ ಸೋಂಕು ಹರಡುವಿಕೆ ಹಾಗೂ ಬಾಧಿತರಾದವರ ಪೈಕಿ ಕೊನೆಯ ಸ್ಥಾನದಲ್ಲಿತ್ತು. ಆದರೆ ಜಿಲ್ಲಾಡಳಿತ ಈ ಬಾರಿ ಇದ್ಯಾವುದನ್ನು ಮಾಡಿಲ್ಲ. ಇನ್ನಾದರು ಎಚ್ಚೆತ್ತುಕೊಂಡು ಗ್ರಾಮೀಣ ಭಾಗದಲ್ಲಿ ಸೋಂಕು ಹರಡುವುದನ್ನ ತಪ್ಪಿಸಬೇಕು ಎನ್ನುವುದ ಸಾರ್ವಜನಿಕರ ಕಳಕಳಿಯಾಗಿದೆ.