ಭಟ್ಕಳ : ಜಂಟಿ ಕಾರ್ಯಾಚರಣೆ ನಡೆಸಿದ ಕಾರವಾರ ಪೊಲೀಸರು ಹಾಗೂ ಭಟ್ಕಳ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಚರ್ಮ ಸಾಗಣೆ ಮಾಡುತ್ತಿದ್ದ ಒಬ್ಬನನ್ನು ಬಂಧಿಸಿ, ಚಿರತೆ ಚರ್ಮವನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಉತ್ತರಕೊಪ್ಪಾ-ಕಟಗಾರಕೊಪ್ಪಾ ಮಾರ್ಗವಾಗಿ ಚಿತ್ರಾಪುರ ಶಿರಾಲಿ ಕಡೆಗೆ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಬೈಕ್ನಲ್ಲಿ ವ್ಯಕ್ತಿಯೊಬ್ಬ ಚಿರತೆ ಚರ್ಮ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಜಿಲ್ಲಾ ಅಪರಾಧ ವಿಭಾಗದ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ , ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ ಮಾರ್ಗದರ್ಶನದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಕಾರ್ಯಚರಣೆ ನಡೆಸಿ, ಕಟಗಾರಕೊಪ್ಪದ ಕಬ್ರೆ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿದ್ದಾರೆ.
ಕಟಗಾರಕೊಪ್ಪ ನಿವಾಸಿ ಬೈರಾ ರಾಮಾ ಗೊಂಡಾ ಅತ್ತಿಬಾರ ಬಂಧಿತ ಆರೋಪಿ. ಬಂಧಿತನಿಂದ ಅಂದಾಜು 15 ಲಕ್ಷ ಮೌಲ್ಯದ ಚಿರತೆ ಚರ್ಮ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸುದರ್ಶನ ನಾಯ್ಕ, ನಾಗರಾಜ ನಾಯ್ಕ, ಉಮೇಶ ನಾಯ್ಕ, ಮಂಜುನಾಥ ಹೆಗಡೆ ಎ.ಸಿ.ಎಫ್ ಸುದರ್ಶನ ಜಿ.ಕೆ ,ಪ್ರಮೋದ ಬಿ, ಮಧುಕರ ನಾಯ್ಕ ಪಾಲ್ಗೊಂಡಿದ್ದರು.