ಶಿರಸಿ: ಯಕ್ಷಗಾನದ ಭೀಷ್ಮ ಹೊಸ್ತೋಟ ಮಂಜುನಾಥ ಭಾಗವತ ಅವರ ನಿಧನದ ಹಿನ್ನಲೆಯಲ್ಲಿ ಅವರ ಪಾರ್ಥೀವ ಶರೀರದ ಮುಂದೆ ಕಾಲಕಾಲ ಹಿಮ್ಮೇಳ ಕಲಾವಿದರಿಂದ ಚಂಡೆ ಹಾಗೂ ಮೃದಂಗ ಬಾರಿಸಿ ಯಕ್ಷಗಾನ ಹಾಡು ಹೇಳುವ ಮೂಲಕ ವಿಶಿಷ್ಠ ನಮನ ಸಲ್ಲಿಸಲಾಯಿತು.
ಮಂಜುನಾಥ ಭಾಗವತರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಶಿರಸಿ ನಗರದ ರುದ್ರಭೂಮಿಯಲ್ಲಿ ಇರಿಸಲಾಗಿತ್ತು. ಈ ವೇಳೆ ಯಕ್ಷಗಾನ ಕಲಾವಿದರು, ಅವರ ನಿಕಟವರ್ತಿಗಳು ಹಾಜರಿದ್ದರು. ಪ್ರಸಿದ್ಧ ಭಾಗವತರಾದ ಕೇಶವ ಹೆಗಡೆ ಕೊಳಗಿ, ಸತೀಶ ಹೆಗಡೆ ದಂಡ್ಕಳ್, ತಿಮ್ಮಪ್ಪ ಭಾಗ್ವತ್ ಬಾಳೆಹದ್ದ ಸೇರಿದಂತೆ ಮುಂತಾದವರು ಪದ್ಯ ಹೇಳಿದದರು. ಪ್ರಸನ್ನ ಹೆಗಡೆ, ವಿಘ್ನೇಶ್ವರ ಕೆಸರಜೊಪ್ಪ ಚಂಡೆ ಬಾರಿಸಿದರು. ಶಂಕರ ಭಾಗವತ ಮೃದಂಗ ಬಾರಿಸುವ ಮೂಲಕ ಅಗಲಿದ ಭಾಗವತರಿಗೆ ನಮಿಸಿದರು.
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರುದ್ರ ಭೂಮಿಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ತಾಲೂಕು ಆಡಳಿತದ ಪ್ರಮುಖರು ಹಾಜರಿದ್ದರು. ಅವರು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು (2016) ಪಡೆದಿದ್ದರು.
1940ರ ಫೆಬ್ರವರಿ 15 ರಂದು ಹೊಸ್ತೋಟದಲ್ಲಿ ಜನಿಸಿದ್ದ ಮಂಜುನಾಥ ಭಾಗವತರು ಪ್ರಸಿದ್ಧ ಯಕ್ಷಗನ ಪ್ರದರ್ಶಕರಾಗಿದ್ದರು. ಅವರು ತಮ್ಮ ಗುರು ಕೆರೆಮನೆ ಶಿವರಾಮ ಹೆಗಡೆ ಅವರಿಂದ ಯಕ್ಷಗಾನದ ಸೂಕ್ಷ್ಮತೆಗಳನ್ನು ಕಲಿತುಕೊಂಡಿದ್ದರು. ಯಕ್ಷಗಾನದ ಪ್ರತಿಯೊಂದು ವಿಷಯದಲ್ಲೂ ಪ್ರವೀಣರಾಗಿದ್ದರು.
ಹೊಸ್ತೋಟ ಅವರು 75ಕ್ಕೂ ಹೆಚ್ಚು ಸ್ಥಳಗಳಲ್ಲಿ ಯಕ್ಷಗಾನ ತರಬೇತಿ ಕಾರ್ಯಕ್ರಮಗಳನ್ನು ನಡೆಸಿದ್ದು, 1,600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಪರಿಸರದ ಬಗೆಗಿನ ಕಾಳಜಿಯೊಂದಿಗೆ ಅವರು ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಪ್ರದರ್ಶನಗೊಂಡಿದ್ದ ‘ಗೋವರ್ಧನ್ ಗಿರಿ ಪೂಜೆ’, ‘ನಿಸರ್ಗ ಸಂಧಾನ’ ಮತ್ತು ‘ಪ್ರಕೃತಿ ಸಂಧಾನ’ ಮುಂತಾದ ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ.
ಹೊಸ್ತೋಟ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1987), ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ಥಿಸುಬ್ಬಾ ಪ್ರಶಸ್ತಿ (2012), ಜನಪದ ಅಕಾಡೆಮಿಯ ವಿಶೇಷ ಪ್ರಶಸ್ತಿ (2012), ಕೆರೆಮನೆ ಶಿವರಾಮ್ ಹೆಗಡೆ ಪ್ರಶಸ್ತಿ (2014) ಸೇರಿದಂತೆ ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಹಲವು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.