ಕಾರವಾರ: ಕಳೆದ ಐದು ವರ್ಷಗಳಿಂದ ಕುಂಟುತ್ತ ಸಾಗುತ್ತಿರುವ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ಒಂದೆಡೆ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಇನ್ನೊಂದೆಡೆ ಹರಿವ ನೀರಿಗೆ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸದ ಕಾರಣ ಮನೆಗಳಿಗೆ ನೀರು ನುಗ್ಗುತ್ತಿದ್ದು, ಮನೆಗಳು ಕುಸಿಯುವ ಭೀತಿ ಎದುರಾಗಿದೆ.
ಜಿಲ್ಲೆಯ ಮಾಜಾಳಿಯಿಂದ ಕುಂದಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕಾಮಗಾರಿ ಅವಧಿ ಮುಗಿದು ತಿಂಗಳಗಳು ಕಳೆಯುತ್ತಾ ಬಂದರೂ ಕೂಡ ಇನ್ನೂ ಪೂರ್ಣಗೊಂಡಿಲ್ಲ. ಸದಾ ಒಂದಲ್ಲ ಒಂದು ಅವಾಂತರವನ್ನು ಸೃಷ್ಟಿಸುತ್ತಿರುವ ಈ ಹೆದ್ದಾರಿ ಇದೀಗ ತಾಲೂಕಿನುದ್ದಕ್ಕೂ ರಸ್ತೆಯಂಚಿನ ಮನೆಗಳ ಜನರ ನಿದ್ದೆ ಕೆಡಿಸುವಂತೆ ಮಾಡಿದೆ.
ಅಗಲೀಕರಣದ ಗುತ್ತಿಗೆ ಪಡೆದಿರುವ ಐಆರ್ಬಿ ಕಂಪನಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದು, ಹೆದ್ದಾರಿಯಂಚಿನಲ್ಲಿ ಎಲ್ಲೆಂದರಲ್ಲಿ ಗುಂಡಿಗಳನ್ನು ತೆಗೆದು ಅರೆಬರಿ ಕಾಮಗಾರಿ ನಡೆಸಿ ಹಾಗೆ ಬಿಟ್ಟಿದ್ದು, ಮಳೆಗಾಲದಲ್ಲಿ ನೀರು ಹರಿದು ಹೋಗಲಾಗದೆ ಹೆದ್ದಾರಿಯುದ್ದಕ್ಕೂ ನೀರು ನಿಲ್ಲುವಂತಾಗಿದೆ. ಅಲ್ಲದೆ ಜೋರಾದ ಮಳೆಗೆ ಎಲ್ಲೆಡೆ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದ್ದು, ಮನೆಗಳು ಕುಸಿಯುವ ಆತಂಕ ಎದುರಾಗಿದೆ ಎನ್ನುತ್ತಾರೆ ಚೆಂಡಿಯಾ ಗ್ರಾಪಂ ಅಧ್ಯಕ್ಷ ದಯಾನಂದ ನಾಯ್ಕ್.
ತಾಲೂಕಿನ ಅರಗಾ, ಚೆಂಡಿಯಾ, ತೋಡುರು, ಅಮದಳ್ಳಿ ಭಾಗದಲ್ಲಿ ಹೆದ್ದಾರಿಗೆ ಹೊಂದಿಕೊಂಡೆ ಸಾಕಷ್ಟು ಮನೆಗಳಿವೆ. ಇಂತಹ ಭಾಗಗಗಳಲ್ಲಿ ಆಳವಾದ ಕಾಲುವೆ, ಹೊಂಡಗಳನ್ನೂ ತೋಡಿ ಹಾಗೆ ಬಿಡಲಾಗಿದೆ. ಆದರೆ, ಈ ಭಾಗದ ಗುಡ್ಡ ಹಾಗೂ ಸಣ್ಣ ಹಳ್ಳಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಸರಾಗವಾಗಿ ಹರಿದು ಸಮುದ್ರ ಸೇರುವ ಬಹುತೇಕ ಕಾಲುವೆಗಳು ಕಾಮಗಾರಿಯಿಂದಾಗಿ ಮುಚ್ಚಿ ಹೋಗಿದೆ. ಇದರಿಂದಲೇ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಲ್ಲುತ್ತಿದ್ದು, ಪ್ರವಾಹ ಬರುವ ಆತಂಕ ಎದುರಾಗಿದೆ ಎನ್ನುತ್ತಾರೆ ಸ್ಥಳೀಯರಾದ ದಿನೇಶ್ ನಾಯ್ಕ್.
ಮನೆಗಳ ಅಕ್ಕಪಕ್ಕದಲ್ಲಿ ನೀರು ನಿಂತಿರುವ ಕಾರಣ ಸೊಳ್ಳೆಗಳೂ ಹೆಚ್ಚಾಗಿ ಡೆಂಘೀ, ಮಲೇರಿಯಾದಂತ ರೋಗಗಳು ಹರಡುವ ಆತಂಕ ಎದುರಾಗಿದೆ. ಅಲ್ಲದೆ ಜನರು ಮನೆಗಳಿಂದ ಓಡಾಡಲು ಸರ್ಕಸ್ ಮಾಡಬೇಕಾದ ಸ್ಥಿತಿ ಕೂಡ ಕಂಡು ಬರುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಐಆರ್ಬಿ ಕಂಪನಿಯವರು ನೀರು ನಿಲ್ಲದಂತೆ ತುರ್ತು ಕ್ರಮ ಕೈಗೊಳ್ಳಬೇಕು ಎನ್ನುವುದು ಈ ಭಾಗದ ಜನರ ಒತ್ತಾಯವಾಗಿದೆ.