ಕಾರವಾರ: ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಯಾವುದೇ ಸಮಯದಲ್ಲಿಯಾದರೂ ನೀರು ಬಿಡುವ ಬಗ್ಗೆ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಶಿವಮೊಗ್ಗ, ಸಿದ್ದಾಪುರ ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ದಿನೇ ದಿನೆ ಏರುತ್ತಿದೆ. ಜಲಾಶಯ ಗರಿಷ್ಠ ಮಟ್ಟವು 1,819 ಅಡಿಗಳಾಗಿದ್ದು, ಇಂದು ಜಲಾಶಯದ ನೀರಿನ ಮಟ್ಟ 1,801 ಅಡಿಗಳಾಗಿರುತ್ತದೆ. ಒಳ ಹರಿವು ಸುಮಾರು 42,770 ಕ್ಯೂಸೆಕ್ ಗಳಾಗಿರುತ್ತದೆ.
ಇದೇ ರೀತಿ ಜಲಾಶಯಕ್ಕೆ ಬರುವ ನೀರಿನ ಹರಿವು ಮುಂದುವರೆದ ಪಕ್ಷದಲ್ಲಿ ಆಣೆಕಟ್ಟೆಯ ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹರಿಬಿಡಲಾಗುವುದು. ಆದ್ದರಿಂದ ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ ಜಾನುವಾರುಗಳೊಂದಿಗೆ ಸುರಕ್ಷತಾ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆಂದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.