ಕಾರವಾರ (ಉ.ಕ): ಉತ್ತರಕನ್ನಡ ಜಿಲ್ಲೆಯ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮಳೆ ಮುಂದುವರಿದಿದ್ದು, ನದಿಗಳು ಉಕ್ಕಿ ಹರಿಯತೊಡಗಿವೆ.
ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಕೊಂಚ ಕಡಿಮೆಯಾಗಿತ್ತು. ಆದರೆ, ಇಂದು ಬೆಳಗ್ಗೆಯಿಂದಲೇ ಮತ್ತೆ ಜೋರಾಗಿದ್ದು, ಸಂಪೂರ್ಣ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ.
ಘಟ್ಟದ ಮೇಲ್ಭಾಗದ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗಗಳಲ್ಲಿ ಮಾತ್ರ ಮಳೆ ನಿರಂತರವಾಗಿ ಮುಂದುವರಿದಿದೆ. ಪರಿಣಾಮ ಗಂಗಾವಳಿ, ಕಾಳಿ, ಅಘನಾಶಿನಿ ನದಿಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಆತಂಕ ಮುಂದುವರಿದಿದೆ.
ಮಾತ್ರವಲ್ಲದೇ ಕಾಳಿ ನದಿಗೆ ನಿರಂತರವಾಗಿ ನೀರು ಹರಿಬಿಡಲಾಗುತ್ತಿದ್ದು, ನದಿ ಪಾತ್ರದ ಕೆಲ ಗ್ರಾಮದ ಮನೆಗಳು ನೆರೆ ಭೀತಿ ಎದುರಿಸುವಂತಾಗಿದೆ.